ಉಳ್ಳಾಲ ರೈಲು ನಿಲ್ದಾಣದ ಅವಗಣನೆ

Update: 2019-09-18 18:08 GMT

ಮಾನ್ಯರೇ,

ಕೇರಳದ ಕಡೆಯಿಂದ ಬರುವ ರೈಲು ಕರ್ನಾಟಕವನ್ನು ಪ್ರವೇಶಿಸುವಾಗ ಮೊದಲು ದೊರೆಯುವ ನಿಲ್ದಾಣವೇ ಉಳ್ಳಾಲ. ಕರ್ನಾಟಕ ಮಾತ್ರವಲ್ಲ, ದಕ್ಷಿಣ ರೈಲ್ವೆಯಲ್ಲೇ ಅತ್ಯಂತ ಅವಗಣನೆಗೆ ಒಳಗಾದ ರೈಲು ನಿಲ್ದಾಣ ಉಳ್ಳಾಲ ಎಂದು ಹೇಳದೆ ವಿಧಿಯಿಲ್ಲ. ರೈಲ್ವೆ ಇಲಾಖೆಯಲ್ಲಿ ಕೇರಳಿಗರ ಪ್ರಾಬಲ್ಯ ಮತ್ತು ಈ ರೈಲು ನಿಲ್ದಾಣ ದಕ್ಷಿಣ ರೈಲ್ವೆಗೆ ಒಳಪಟ್ಟಿರುವ ಕಾರಣದಿಂದ ಮಾತ್ರ ಉಳ್ಳಾಲ ರೈಲು ನಿಲ್ದಾಣದ ಸ್ಥಿತಿ ಹೀಗಾಗಿರು ವುದಲ್ಲ, ನಾಗರಿಕರ ನಿರ್ಲಕ್ಷ್ಯ ಮನೋಭಾವದ ಕಾರಣದಿಂದಲೂ ಹೀಗಾಗಿದೆ ಎಂದು ಹೇಳಬೇಕಾಗಿದೆ.

ಉಳ್ಳಾಲ ರೈಲು ನಿಲ್ದಾಣದಿಂದ ಮಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಕಡಿಮೆ ಇರಬಹುದು. ಆದರೆ ಉಳ್ಳಾಲದಿಂದ ಕೇರಳದ ಕಡೆಗೆ ಹೋಗುವವರ ಮತ್ತು ಕೇರಳದಿಂದ ಉಳ್ಳಾಲಕ್ಕೆ ಬರುವವರ ಸಂಖ್ಯೆ ಬಹಳ ದೊಡ್ಡದಿದೆ. ಈ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇಲ್ಲಿ ರೈಲುಗಳು ನಿಲ್ಲುವುದಿಲ್ಲ. ಬೆಳಗ್ಗೆ 8ರ ಬಳಿಕ ಸಂಜೆ 5ರ ತನಕ ಕೇರಳದ ಕಡೆಗೆ ಹೋಗಲು ರೈಲುಗಳೇ ಇಲ್ಲ. ಅದೇ ರೀತಿ ಬೆಳಗ್ಗೆ 10ರ ಬಳಿಕ ಸಂಜೆ 7ರ ತನಕ ಇಲ್ಲಿಗೆ ಬರಲು ರೈಲುಗಳಿಲ್ಲ, ನಿತ್ಯ ಸಾವಿರಾರು ಜನರು ದೇರಳಕಟ್ಟೆಯಲ್ಲಿರುವ ಆಸ್ಪತ್ರೆಗಳಿಗೆ ಕೊಣಾಜೆ, ಮುಡಿಪು, ತೊಕ್ಕೊಟ್ಟು ಕಡೆಗೆ ಹೋಗುವವರಿರುತ್ತಾರೆ. ಇವರ ಬಗ್ಗೆ ರೈಲ್ವೆ ಇಲಾಖೆಗಾಗಲೀ ರೈಲ್ವೆ ಬಳಕೆದಾರ ಸಮಿತಿಗಾಗಲೀ ಕರುಣೆ ಬಂದಿಲ್ಲ.

 ಇದಕ್ಕಿಂತಲೂ ಕಠಿಣವಾದ ಸಂಗತಿಯೇನೆಂದರೆ ಈ ಉಳ್ಳಾಲ ರೈಲು ನಿಲ್ದಾಣ ಇತ್ತೀಚೆಗೆ ಒಂದು ರೀತಿಯಲ್ಲಿ ದುರುಪಯೋಗವಾಗುತ್ತಿದೆ. ಪ್ರಯಾಣಿಕರ ಸೌಲಭ್ಯಕ್ಕೆ ಬಳಕೆಯಾಗಬೇಕಿದ್ದ ಈ ರೈಲು ನಿಲ್ದಾಣದ ವಿಶಾಲ ಖಾಲಿ ಜಾಗವನ್ನು ಜಲ್ಲಿ ರಾಶಿ ಹಾಕಲು, ಕಾಂಕ್ರಿಟ್ ಸ್ಲೀಪರ್‌ಗಳನ್ನು ದಾಸ್ತಾನು ಮಾಡಿಡಲು, ಕಬ್ಬಿಣದ ತೊಲೆಗಳನ್ನು ಪೇರಿಸಿಡಲು ಬಳಸಿಕೊಳ್ಳಲಾಗುತ್ತಿದೆ. ದಾಸ್ತಾನು ಮಾಡಿದ ಸಾಮಗ್ರಿಗಳೆಲ್ಲ ಕೇರಳದ ಇತರ ನಿಲ್ದಾಣಗಳ ಬಳಕೆಗೆ ಇರುವವೇ ಹೊರತು ಉಳ್ಳಾಲಕ್ಕಾಗಲೀ ಮಂಗಳೂರಿಗಾಗಲೀ ಅದರ ಪ್ರಯೋಜನ ಕಡಿಮೆ. ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಬದಲು, ನಿಲ್ದಾಣದ ಖಾಲಿಸ್ಥಳವನ್ನು ಅನೇಕ ಇತರ ಉದ್ದೇಶಗಳಿಗೆ ಬಳಸುವ ಕಾಮಗಾರಿಗಳು ಇಲ್ಲಿ ನಡೆಯುತ್ತಿವೆ.

ಸರಿಯಾಗಿ ಯೋಚಿಸಿದರೆ ಈ ರೈಲು ನಿಲ್ದಾಣವನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು. ಪ್ರಯಾಣಿಕರು ಹೆಚ್ಚಾಗಿ ಪೂರ್ವದ ಕಡೆಯಿಂದ ಬಂದು ಹೋಗುವವರಾದ ಕಾರಣ, ರೈಲ್ವೆ ಕಚೇರಿಗಳನ್ನು ಪಶ್ವಿಮದ ಬದಲು ಪೂರ್ವಕ್ಕೆ ಸ್ಥಳಾಂತರಿಸಬಹುದು. ಪೂರ್ವಭಾಗದಲ್ಲಿ ರಸ್ತೆ ಸಂಪರ್ಕ ಸುಲಭ ಮಾತ್ರವಲ್ಲ, ಈ ಭಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವಿಶಾಲವಾದ ಸ್ಥಳ ಲಭ್ಯವಿದೆ. ಈಗಿರುವಂತೆ ಪ್ರಯಾಣಿಕರು ಪಶ್ಚಿಮದ ಕಡೆಯಿಂದ ರಿಕ್ಷಾ, ಕಾರು ಹತ್ತಿ ಬರುವಾಗ ರೈಲು ಗೇಟು ತಡೆಯುವ ತೊಂದರೆ ಆಗ ಇರುವುದಿಲ್ಲ. ಉಳ್ಳಾಲ ರೈಲು ನಿಲ್ದಾಣದಲ್ಲಿ ಇತರ ಅನೇಕ ನಿಲ್ದಾಣಗಳಿಗಿಂತ ಹೆಚ್ಚಿನ ಭೂಮಿ ಲಭ್ಯವಿರುವುದರಿಂದ, ಉಳ್ಳಾಲ ರೈಲು ನಿಲ್ದಾಣವನ್ನು ಮಂಗಳೂರು ನಿಲ್ದಾಣಕ್ಕೆ ಸಮನಾಗಿ ಅಭಿವೃದ್ಧಿಪಡಿಸಬಹುದು. ಇಲ್ಲಿರುವ ಫ್ಲಾಟ್‌ಫಾರ್ಮ್‌ಗಳ ಸಂಖ್ಯೆಯನ್ನು 6-7ಕ್ಕೆ ಹೆಚ್ಚಿಸಿ, ಇಲ್ಲಿಂದಲೇ ಉತ್ತರದ ಕಡೆಗೆ ಹೋಗುವ ಅನೇಕ ಹೊಸ ರೈಲುಗಳನ್ನು ಆರಂಭಿಸಬಹುದು. ಮಂಗಳೂರು ರೈಲು ನಿಲ್ದಾಣದಲ್ಲಿ ಫ್ಲಾಟ್‌ಫಾರ್ಮ್‌ಗಳ ಕೊರತೆ, ವಿಸ್ತರಣೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಹೊಸ ರೈಲುಗಳನ್ನು ಉಳ್ಳಾಲದಿಂದಲೇ ಆರಂಭಿಸಬಹುದು. ಇದರಿಂದ ಮಂಗಳೂರು ರೈಲು ನಿಲ್ದಾಣದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಿಯಾರೇ?

Writer - -ಕೆ. ಎಸ್., ಮಂಗಳೂರು

contributor

Editor - -ಕೆ. ಎಸ್., ಮಂಗಳೂರು

contributor

Similar News