ಮತ್ತೆ ವಿವಾದ ಮೈಮೇಲೆ ಎಳೆದುಕೊಂಡ ಪ್ರಜ್ಞಾ ಸಿಂಗ್

Update: 2019-09-19 03:39 GMT

ಭೋಪಾಲ್, ಸೆ.19: ಪತ್ರಕರ್ತರನ್ನು 'ಅಪ್ರಾಮಾಣಿಕರು' ಎಂದು ಕರೆಯುವ ಮೂಲಕ ಬಿಜೆಪಿ ಸಂಸದೆ ಹಾಗೂ ಮಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ. ಪತ್ರಕರ್ತರನ್ನು ಪ್ರಾಮಾಣಿಕರಲ್ಲ ಎಂದು ಹೇಳಿದ ಪ್ರಜ್ಞಾ, ಸ್ವತಃ ಜನಸಾಮಾನ್ಯರಿಗೆ 500 ರೂಪಾಯಿ ನೋಟುಗಳನ್ನು ವಿತರಿಸುತ್ತಿರುವ ವೀಡಿಯೊ ವಿವಾದಕ್ಕೆ ಕಾರಣವಾಗಿದೆ.

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ನಗುತ್ತಾ ಮಾಧ್ಯಮದವರು ಪ್ರಾಮಾಣಿಕರಲ್ಲ ಎಂದು ಹೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ 500 ರೂಪಾಯಿ ನೋಟನ್ನು ಠಾಕೂರ್ ನೀಡುತ್ತಿರುವ ದೃಶ್ಯ ಮತ್ತೊಂದು ತುಣುಕಿನಲ್ಲಿ ದಾಖಲಾಗಿದೆ.

ಭಿಕ್ಷಾಟನೆಯೇ ತಮ್ಮ ಆದಾಯ ಮೂಲ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ಪ್ರಜ್ಞಾ ಹೇಳಿಕೊಂಡದ್ದನ್ನು ನೆಟ್ಟಿಗರು ಕೆದಕಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಸಿಎಂ ದಿಗ್ವಿಜಯ ಸಿಂಗ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದ ಪ್ರಜ್ಞಾ, ಮಾಧ್ಯಮದವರತ್ತ ನೋಡಿ ನಗುತ್ತಾ, "ನಾನು ನಿಮ್ಮ ಬಗ್ಗೆ ಹೊಗಳುವುದನ್ನು ಕೇಳಿ; ಸೆಹೋರ್‌ನ ಇಡೀ ಮಾಧ್ಯಮದವರು ಅಪ್ರಾಮಾಣಿಕರು" ಎಂದು ಹೇಳುತ್ತಿರುವುದು ಮೊದಲ ವೀಡಿಯೊದಲ್ಲಿ ದಾಖಲಾಗಿದೆ.

ಸಂಸದೆ ಈ ರೀತಿಯ ಹೇಳಿಕೆ ನೀಡಿರುವುದನ್ನು ನೋಡಿದರೆ ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪಂಕಜ್ ಚತುರ್ವೇದಿ ಟೀಕಿಸಿದ್ದಾರೆ.

ಬಿಜೆಪಿ ವಿವಾದ ಶಮನಗೊಳಿಸುವ ಪ್ರಯತ್ನ ನಡೆಸಿದ್ದು, "ಠಾಕೂರ್ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ; ಆದರೆ ಭೋಪಾಲ್ ಅಥವಾ ಬೇರೆ ಯಾವುದೇ ಕಡೆ ಮಾಧ್ಯಮದ ಬದ್ಧತೆಯನ್ನು ಪಕ್ಷ ಗೌರವಿಸುತ್ತದೆ" ಎಂದು ಪಕ್ಷದ ವಕ್ತಾರ ರಜನೀಶ್ ಅಗರ್‌ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News