'ಹೌಡಿ ಮೋದಿ': ರಾಹುಲ್, ಪ್ರಿಯಾಂಕಾ ಕುಟುಕಿದ್ದು ಹೀಗೆ..

Update: 2019-09-19 03:58 GMT

ಹೊಸದಿಲ್ಲಿ, ಸೆ.19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತಿಯಲ್ಲಿ ನಡೆಯುವ 'ಹೌಡಿ ಮೋದಿ' ಮೆಗಾ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಲೇವಡಿ ಮಾಡಿದ್ದಾರೆ. "ವಿಶ್ವಮಟ್ಟದ ಆಡಂಬರದಿಂದ ದೇಶದ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ" ಎಂದು ಕುಟುಕಿದ್ದಾರೆ.

ತಮ್ಮ ಅಮೆರಿಕ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಮುಂದಿನ ರವಿವಾರ ಟೆಕ್ಸಾಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಸಲುವಾಗಿ 'ಹೌಡಿ ಮೋದಿ' ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ಶೀರ್ಷಿಕೆಯಲ್ಲೇ ಗುರಿಯಾಗಿಟ್ಟುಕೊಂಡು, ದೇಶದ ಆರ್ಥಿಕ ವೈಫಲ್ಯವನ್ನು ಪ್ರಶ್ನಿಸಿರುವ ರಾಹುಲ್, "ಹೌಡಿ ಎಕಾನಮಿ ಡೂಯಿಂಗ್, ಮಿಸ್ಟರ್ ಮೋದಿ?" ಎಂದು ಟ್ವೀಟ್ ಮಾಡಿದ್ದಾರೆ.

ಭಾರತದ ಆರ್ಥಿಕತೆ ಬಗ್ಗೆ ವಿಶ್ವಾಸ ಕಳೆದುಕೊಂಡ ಅಂತಾರಾಷ್ಟ್ರೀಯ ಹೂಡಿಕೆದಾರರು ಕಳೆದ ಜೂನ್‌ನಿಂದೀಚೆಗೆ 45 ಶತಕೋಟಿ ಡಾಲರ್ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂಬ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಕೂಡಾ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, ಹೂಡಿಕೆದಾರರ ವಿಶ್ವಾಸ ನಡುಗುತ್ತಿದೆ. ಆದರೆ ಮೋದಿ ಸರ್ಕಾರ ಸತ್ಯ ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News