ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಕಾರಿ ಸೌಲಭ್ಯ ಲಭಿಸಲು ಶ್ರಮಿಸಿ: ಸುನೀಲ್ ದಿಯೋಧರ್

Update: 2019-09-19 11:48 GMT

ಮಂಗಳೂರು, ಸೆ.19: ನಗರ/ಪಟ್ಟಣಗಳಲ್ಲಿ ಶುಚಿಯಾಗಿರುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಅವರ ಸಹಿತ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಸೌಲಭ್ಯಗಳು ಲಭಿಸಲು ಪ್ರತಿಯೊಬ್ಬ ಕಾರ್ಯಕರ್ತ ಕೂಡ ಶ್ರಮಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದಿಯೋಧರ್ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ವತಿಯಿಂದ ನಗರದ ಪಿವಿಎಸ್ ಬಳಿಯ ವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ ಗುರುವಾರ ನಡೆದ ಮಂಗಳೂರಿನ ಪೌರ ಕಾರ್ಮಿಕರು ಮತ್ತು ‘ಡಿ’ ಗ್ರೂಪ್ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯ ಜನ್ಮ ದಿನಾಚರಣೆಯು ಸಾರ್ಥಕವಾಗಬೇಕಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವರು ನೀಡಿದ ಮಹತ್ವದ ಯೋಜನೆಗಳ ಪ್ರಯೋಜನ ಸಿಗುವಂತಾಗಬೇಕು. ಜಿಲ್ಲಾ ಬಿಜೆಪಿ ವತಿಯಿಂದ ಕನಿಷ್ಟ 100 ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುವಂತೆ ಚಾರಿಟೇಬಲ್/ಎಜುಕೇಶನ್ ಟ್ರಸ್ಟ್‌ಗಳ ಪ್ರಮುಖರಲ್ಲಿ ಮಾತುಕತೆ ನಡೆಸಿ ಅದರ ಯಶಸ್ವಿಗೆ ಮುಂದಾಗಬೇಕು ಎಂದು ಸುನೀಲ್ ದಿಯೋಧರ್ ಹೇಳಿದರು.

ಈ ಸಂದರ್ಭ ಮಂಗಳೂರಿನಲ್ಲಿ 37 ವರ್ಷದಿಂದ ಪೌರ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿರುವ 58 ವರ್ಷದ ಹೊನ್ನಮ್ಮ ಮಹಾಕಾಳಿಪಡ್ಪು ಅವರ ಪಾದ ತೊಳೆದು ಸುನೀಲ್ ದಿಯೋಧರ್ ಸನ್ಮಾನಿಸಿದರು.

ಬಿಜೆಪಿ ದಕ್ಷಿಣ ಮಂಡಲ ಉಪಾಧ್ಯಕ್ಷ ಶ್ರೀನಿವಾಸ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಯೋಗೀಶ್ ಭಟ್, ದ.ಕ. ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಬೃಜೇಶ್ ಚೌಟ, ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಜಿಲ್ಲಾ ಕಾರ್ಯದರ್ಶಿ ಪ್ರಭಾ ಮಾಲಿನಿ, ಖಜಾಂಚಿ ಸಂಜಯ್ ಪ್ರಭು, ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಕಂಡೆಟ್ಟು ಉಪಸ್ಥಿತರಿದ್ದರು.

ದಕ್ಷಿಣ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ ಸ್ವಾಗತಿಸಿದರು. ನಿವೇದಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಫ್ಲೆಕ್ಸ್ ಅಳವಡಿಸಬಾರದು

ಕಾರ್ಯಕ್ರಮ ಆಯೋಜಿಸುವಾಗ ಫ್ಲೆಕ್ಸ್, ಬ್ಯಾನರ್ ಅಳವಡಿಸಬಾರದು. ಪ್ರಧಾನಿ ತಮ್ಮ ಹುಟ್ಟುಹಬ್ಬಕ್ಕೆ ಯಾರೂ ಪ್ಲೆಕ್ಸ್ ಅಳವಡಿಸಿ ಶುಭಾಶಯ ತಿಳಿಸಬಾರದು ಎಂದು ಸೂಚಿಸಿದ್ದಾರೆ ಎಂದು ವೇದಿಕೆಯಲ್ಲಿ ಅಳವಡಿಸಲಾದ ಪ್ಲೆಕ್ಸ್ ಬ್ಯಾನರ್ ಗಮನಿಸಿ ಸುನಿಲ್ ದಿಯೋಧರ್ ಹೇಳಿದರು.

ಉಡುಗೊರೆ ಹಣದಿಂದ ಹೆಣ್ಣು ಮಕ್ಕಳ ಶಿಕ್ಷಣ

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ದೊರಕಿದ್ದ ಉಡುಗೊರೆಗಳನ್ನು ಹರಾಜು ಹಾಕಿ ಅದರಿಂದ ಬಂದ 300 ಕೋ.ರೂ.ಗಳನ್ನು ಗುಜರಾತ್‌ನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿದ್ದಾರೆ. ಪ್ರಧಾನಿಯಾದ ಬಳಿಕವೂ ವಿದೇಶಗಳಲ್ಲಿ ದೊರಕಿದ 500 ಕೋ.ರೂ.ಗಳಿಗೂ ಅಧಿಕ ಮೊತ್ತದ ಉಡುಗೊರೆಗಳನ್ನು ಹರಾಜಿಗೆ ಹಾಕಿ ಸಮಾಜಕ್ಕೆ ಅರ್ಪಿಸಲು ಮುಂದಾಗಿದ್ದಾರೆ ಎಂದು ಸುನೀಲ್ ದಿಯೋಧರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News