‘ಸೂಪರ್ 30’ ಸ್ಥಾಪಕ ಆನಂದ್ ಕುಮಾರ್‌ಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ

Update: 2019-09-19 14:05 GMT

ವಾಶಿಂಗ್ಟನ್, ಸೆ. 19: ‘ಸೂಪರ್ 30’ ಸ್ಥಾಪಕ ಹಾಗೂ ಖ್ಯಾತ ಗಣಿತಜ್ಞ ಆನಂದ್ ಕುಮಾರ್‌ರನ್ನು ಅಮೆರಿಕದಲ್ಲಿ ಪ್ರತಿಷ್ಠಿತ ಬೋಧನಾ ಪ್ರಶಸ್ತಿಯಿಂದ ಗೌರವಿಸಲಾಗಿದೆ. ಭಾರತದಲ್ಲಿ, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅವರು ಕೊಟ್ಟಿರುವ ದೇಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ‘ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ 2019’ ಪ್ರಶಸ್ತಿ ನೀಡಲಾಗಿದೆ.

ಕಳೆದ ವಾರಾಂತ್ಯದಲ್ಲಿ ಕ್ಯಾಲಿಫೋರ್ನಿಯದ ಸ್ಯಾನ್‌ಜೋಸ್ ನಗರದಲ್ಲಿ ನಡೆದ ಫೌಂಡೇಶನ್ ಫಾರ್ ಎಕ್ಸಲೆನ್ಸ್ (ಎಫ್‌ಎಫ್‌ಇ) ಸಂಸ್ಥೆಯ 25ನೇ ವಾರ್ಷಿಕ ಸಮಾರಂಭದಲ್ಲಿ 46 ವರ್ಷದ ಸಾಧಕನಿಗೆ ಫೌಂಡೇಶನ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆನಂದ್ ಕುಮಾರ್, ಶಿಕ್ಷಣವು ಜಗತ್ತಿನ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡುವ ಅತ್ಯಂತ ಪ್ರಬಲ ಅಸ್ತ್ರವಾಗಲು ನೆರವು ನೀಡುವಂತೆ ಅಮೆರಿಕ ಮತ್ತು ಜಾಗತ್ತಿನೆಲ್ಲೆಡೆ ಇರುವ ಪ್ರಬಲ ಭಾರತೀಯ ಸಮುದಾಯಕ್ಕೆ ಮನವಿ ಮಾಡಿದರು.

ಸೂಪರ್ 30 ಕಾರ್ಯಕ್ರಮ

ಅತ್ಯಂತ ವಿನೂತನವಾಗಿರುವ ‘ಸೂಪರ್ 30’ ಎಂಬ ಕಾರ್ಯಕ್ರಮವನ್ನು ಆನಂದ್ ಕುಮಾರ್ 18 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ವರ್ಷವಿಡೀ ಉಚಿತ ತರಬೇತಿ ನೀಡಿ, ಭಾರತದ ಅತ್ಯಂತ ಮಹತ್ವದ ಐಐಟಿ-ಜೆಇಇ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನೆರವು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಈ ಕಾರ್ಯಕ್ರಮವು ಭಾರೀ ಯಶಸ್ಸು ಪಡೆದಿದೆ. ಶತಮಾನಗಳಿಂದ ಅವಕಾಶ ವಂಚಿತ ಸಮುದಾಯಗಳ ಮಕ್ಕಳು ಈ ಪ್ರತಿಷ್ಠಿತ ಸಂಸ್ಥೆಗಳನ್ನು ಸೇರಿ ಶತಮಾನಗಳ ಬದಲಾವಣೆಯನ್ನೇ ತಂದಿರುವುದು ಈಗ ಇತಿಹಾಸ.

► ‘ಸೂಪರ್ 30’ ಚಿತ್ರದ ಹಿಂದಿನ ಶಕ್ತಿ

ಆನಂದ್ ಕುಮಾರ್ ಬದುಕನ್ನು ಆಧರಿಸಿದ, ಹೃತಿಕ್ ರೋಶನ್ ನಟನೆಯ ಹಿಂದಿ ಭಾಷೆಯ ಚಿತ್ರ ‘ಸೂಪರ್ 30’ ಇತ್ತೀಚೆಗೆ ಭಾರೀ ಸುದ್ದಿ ಮಾಡಿದೆ. ಭಾರತದಲ್ಲಿ ಜುಲೈ 12ರಂದು ಬಿಡುಗಡೆಯಾದ, ಸುಮಾರು 65 ಕೋಟಿ ರೂಪಾಯಿ ಬಜೆಟ್‌ನ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 209 ಕೋಟಿ ರೂಪಾಯಿ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News