ಹೌದಿ ಬಂಡುಕೋರರ ಹೇಳಿಕೆಯಲ್ಲಿ ವಿಶ್ವಾಸಾರ್ಹತೆಯ ಕೊರತೆ: ಫ್ರಾನ್ಸ್ ವಿದೇಶ ಸಚಿವ

Update: 2019-09-19 14:02 GMT

ಪ್ಯಾರಿಸ್, ಸೆ. 19: ಸೌದಿ ಅರೇಬಿಯದ ಎರಡು ತೈಲ ಸ್ಥಾವರಗಳ ಮೇಲೆ ತಾವು ದಾಳಿ ನಡೆಸಿದ್ದೇವೆ ಎಂಬ ಯೆಮನ್ ಬಂಡುಕೋರರ ಹೇಳಿಕೆಯಲ್ಲಿ ‘ವಿಶ್ವಾಸಾರ್ಹತೆಯ ಕೊರತೆ’ಯಿದೆ ಎಂದು ಫ್ರಾನ್ಸ್‌ನ ವಿದೇಶ ಸಚಿವ ಜೀನ್-ಯೆವಸ್ ಲೆ ಡ್ರಿಯನ್ ಗುರುವಾರ ಹೇಳಿದ್ದಾರೆ.

‘‘ಯೆಮನ್‌ನಲ್ಲಿ ಬಂಡುಕೋರರಾಗಿರುವ ಹೌದಿಗಳು, ಈ ದಾಳಿಯನ್ನು ಮಾಡಿದ್ದು ತಾವು ಘೋಷಿಸಿಕೊಂಡಿದ್ದಾರೆ. ಆದರೆ, ಅದರಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ’’ ಎಂದು ಫ್ರಾನ್ಸ್‌ನ ‘ಸಿನ್ಯೂಸ್’ ಚಾನೆಲ್‌ಗೆ ಲೆ ಡ್ರಿಯನ್ ಹೇಳಿದರು.

ಹೌದಿ ಬಂಡುಕೋರರಿಗೆ ಇರಾನ್ ಆಡಳಿತ ಬೆಂಬಲ ನೀಡುತ್ತಿದೆ ಎನ್ನಲಾಗಿದೆ.

ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ಹೌದಿ ಬಂಡುಕೋರರು ದಾಳಿ ಮಾಡಿದ್ದಾರೆ ಎನ್ನುವ ವಾದವನ್ನು ಅಮೆರಿಕ ಮತ್ತು ಸೌದಿ ಅರೇಬಿಯಗಳೆರಡೂ ತಿರಸ್ಕರಿಸಿವೆ. ಈ ದಾಳಿಯ ಹಿಂದೆ ಸೌದಿ ಅರೇಬಿಯದ ಬದ್ಧ ವಿರೋಧಿಯಾಗಿರುವ ಇರಾನ್ ಇದೆ ಎಂದು ಆ ದೇಶಗಳು ಆರೋಪಿಸಿವೆ.

ಸೌದಿ ಅರೇಬಿಯವು ಬುಧವಾರ ‘25 ಡ್ರೋನ್‌ಗಳು ಮತ್ತು ಕ್ರೂಸ್ ಕ್ಷಿಪಣಿಗಳ ಚೂರು’ಗಳನ್ನು ಪ್ರದರ್ಶಿಸಿತು ಹಾಗೂ ಈ ದಾಳಿಯನ್ನು ಇರಾನ್ ನಡೆಸಿದೆ ಎಂದು ಹೇಳಿತು.

ಯೆಮನ್‌ನಿಂದ ಈ ಪ್ರಮಾಣದ ಮತ್ತು ವ್ಯಾಪ್ತಿಯ ದಾಳಿಗಳನ್ನು ನಡೆಸುವ ಹೌದಿ ಬಂಡುಕೋರರ ಸಾಮರ್ಥ್ಯವನ್ನು ಫ್ರಾನ್ಸ್ ವಿದೇಶ ಸಚಿವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News