ಅಯೋಧ್ಯೆ ಪ್ರಕರಣ: ಮುಸ್ಲಿಂ ಅರ್ಜಿದಾರರ ವಕೀಲರಿಗೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯಿಂದ ಕ್ಷಮೆಯಾಚನೆ

Update: 2019-09-19 14:05 GMT

ಹೊಸದಿಲ್ಲಿ, ಸೆ.19: ಅಯೋಧ್ಯೆ ಪ್ರಕರಣದಲ್ಲಿ ಮುಸ್ಲಿಮ್ ಅರ್ಜಿದಾರರ ಪರ ವಾದಿಸುತ್ತಿರುವುದನ್ನು ವಿರೋಧಿಸಿ ಹಿರಿಯ ನ್ಯಾಯವಾದಿ ರಾಜೀವ್ ಧವನ್‌ಗೆ ಆಕ್ಷೇಪಾರ್ಹ ಪತ್ರ ಬರೆದಿದ್ದ ವ್ಯಕ್ತಿಯ ವಿರುದ್ಧದ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್ ಮುಕ್ತಾಯಗೊಳಿಸಿದೆ. ಪತ್ರ ಬರೆದಿದ್ದ 88 ವರ್ಷದ ನಿವೃತ್ತ ಪ್ರೊಫೆಸರ್ ಎನ್ ಷಣ್ಮುಗಂ, ಪತ್ರದಲ್ಲಿರುವ ಪದಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ನಿಂದನೆ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಸಿಜೆಐ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠ ತಿಳಿಸಿದೆ.

“ಅಯೋಧ್ಯೆಯಲ್ಲಿರುವ ಹಕ್ಕಿಗಾಗಿ ಹಿಂದುಗಳು ಹೋರಾಟ ನಡೆಸುತ್ತಿರುವಾಗ ಧವನ್ ಧಾರ್ಮಿಕ ನಂಬಿಕೆಗೆ ವಿಶ್ವಾಸದ್ರೋಹ ಮಾಡಿದ್ದಾರೆ. ಅವರು ತಮ್ಮ ಪಾಪದ ಫಲ ಖಂಡಿತಾ ಉಣ್ಣಲಿದ್ದಾರೆ” ಎಂದು ಷಣ್ಮುಗಂ ಪತ್ರದಲ್ಲಿ ಉಲ್ಲೇಖಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ನ್ಯಾಯವಾದಿ ಧವನ್‌ಗೆ ಆಕ್ಷೇಪಾರ್ಹ ಪತ್ರ ಬರೆದಿರುವ ಷಣ್ಮುಗಂಗೆ ಎಚ್ಚರಿಕೆ ನೀಡಿದ ನ್ಯಾಯಾಲಯ, ಪ್ರಕರಣ ಮುಕ್ತಾಯಗೊಳಿಸಿರುವುದಾಗಿ ತಿಳಿಸಿದೆ.

ಹಿರಿಯ ನಾಗರಿಕರಾಗಿರುವ ಪ್ರೊಫೆಸರ್ ಷಣ್ಮುಗಂಗೆ ಯಾವುದೇ ಶಿಕ್ಷೆ ವಿಧಿಸಲು ತಾವು ಬಯಸುವುದಿಲ್ಲ. ಆದರೆ ಈ ವಿಷಯದಲ್ಲಿ ದೇಶದ ಜನರಿಗೆ ಎಚ್ಚರಿಕೆಯ ಸಂದೇಶ ನೀಡಬೇಕು ಎಂಬುದು ತಮ್ಮ ನಿಲುವಾಗಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News