ವಾಮಾಚಾರ ನಡೆಸಿ ಮಹಿಳೆಯನ್ನು ಕೊಂದ ಎಂದು ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಕುಟುಂಬಸ್ಥರು

Update: 2019-09-19 14:10 GMT

  ಹೈದರಾಬಾದ್, ಸೆ.19: ವಾಮಾಚಾರ ಪ್ರಯೋಗಿಸಿ ಮಹಿಳೆಯ ಸಾವಿಗೆ ಕಾರಣವಾಗಿದ್ದಾನೆ ಎಂಬ ಶಂಕೆಯಲ್ಲಿ ಗುಂಪೊಂದು ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಘಟನೆ ಹೈದರಾಬಾದ್ ಬಳಿಯ ಅದ್ರಸಪಳ್ಳಿ ಗ್ರಾಮದಲ್ಲಿ ನಡೆದಿದೆ.

 ಗಂಭೀರ ಗಾಯಗೊಂಡು ಮೃತಪಟ್ಟ ವ್ಯಕ್ತಿಯನ್ನು ಮಹಿಳೆಯ ಅಂತ್ಯಕ್ರಿಯೆ ನಡೆಸಿದ ಚಿತೆಯಲ್ಲಿಯೇ ಸುಟ್ಟುಹಾಕಿ ಸಾಕ್ಷಿ ನಾಶಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬೋವಿನಿ ಆಂಜನೇಯಲು ಎಂಬ 24 ವರ್ಷದ ವ್ಯಕ್ತಿ ಮಾಟ ಮಂತ್ರ ಪ್ರಯೋಗಿಸುವ ಬಗ್ಗೆ ಸ್ಥಳೀಯರಲ್ಲಿ ಶಂಕೆಯಿತ್ತು. ಬುಧವಾರ ಪರಿಸರದ 45 ವರ್ಷದ ಮಹಿಳೆ ಲಕ್ಷ್ಮಿ ಎಂಬಾಕೆ ಸುದೀರ್ಘ ಕಾಲದ ಅಸ್ವಸ್ಥತೆಯಿಂದ ಮೃತಪಟ್ಟಿದ್ದಳು. ಆದರೆ ಮಹಿಳೆಯ ಸಾವಿಗೆ ಆಂಜನೇಯಲು ವಾಮಾಚಾರ ಮಾಡಿದ್ದು ಕಾರಣ ಎಂದು ಮೃತ ಮಹಿಳೆಯ ಸಂಬಂಧಿಕರು ಶಂಕಿಸಿದ್ದಾರೆ.

ಬುಧವಾರ ಸಂಜೆ ಲಕ್ಷ್ಮಿಯ ಅಂತ್ಯಕ್ರಿಯೆ ನಡೆದಿದ್ದು ಈ ಸಂದರ್ಭ ಆಂಜನೇಯಲು ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ತಕ್ಷಣ ಆತನನ್ನು ಅಡ್ಡಗಟ್ಟಿದ ಲಕ್ಷ್ಮಿಯ ಕುಟುಂಬಿಕರು ಆತನನ್ನು ಥಳಿಸಿದ್ದಾರೆ. ಏಟು ತಿಂದ ಆಂಜನೇಯಲು ಕುಸಿದುಬಿದ್ದು ಮೃತಪಟ್ಟಿದ್ದಾನೆ. ಆಗ ಮೃತದೇಹವನ್ನು ಅದೇ ಚಿತೆಗೆ ಎಸೆದು ಅಲ್ಲಿಂದ ತೆರಳಿದ್ದಾರೆ . ಆದರೆ ಘಟನೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿಚಾರಣೆ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News