ಭಾರತದಲ್ಲಿ ಆರ್ಥಿಕ ಬಿಕ್ಕಟ್ಟಿಲ್ಲ ಎಂದ ಕೇಂದ್ರ ಸಚಿವ ಜಾವಡೇಕರ್

Update: 2019-09-19 16:35 GMT

ಹೊಸದಿಲ್ಲಿ,ಸೆ.19: ಭಾರತದಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟಿಲ್ಲ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು,ಆರ್ಥಿಕತೆಯನ್ನು ಬಲಗೊಳಿಸಲು ಸರಕಾರವು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

‘‘ದೇಶದ ಆರ್ಥಿಕತೆಯ ಬುನಾದಿಗಳು ಸದೃಢವಾಗಿವೆ,ಯಾವುದೇ ಬಿಕ್ಕಟ್ಟಿಲ್ಲ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಕೆಲವು ಸಮಸ್ಯೆಗಳಿವೆ,ಆದರೆ ನಾವು ಎಲ್ಲ ಸಮಸ್ಯೆಗಳನ್ನು ಬಗಹರಿಸುತ್ತಿದ್ದೇವೆ ’’ಎಂದರು.

 ದೇಶದಲ್ಲಿ ಆರ್ಥಿಕ ಹಿಂಜರಿತವಿದ್ದರೂ ಅಮೆರಿಕದ ಹ್ಯೂಸ್ಟನ್‌ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕಾಗಿ ಸರಕಾರದ ವಿರುದ್ಧ ಕಾಂಗ್ರೆಸ್ ದಾಳಿಗೆ ಪ್ರತಿಕ್ರಿಯಿಸಿದ ಜಾವಡೇಕರ್,‘‘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಿರುವ ಇಂತಹ ಅವಕಾಶವನ್ನು ಕಾಂಗ್ರೆಸ್ ಎಂದಿಗೂ ಪಡೆಯುವುದಿಲ್ಲ. ‘ಹೌಡಿ ಮೋದಿ ’ ಕಾರ್ಯಕ್ರಮ ನಡೆಯಲಿರುವ ಸ್ಟೇಡಿಯಂ ಈಗಾಗಲೇ ಹೌಸ್‌ಫುಲ್ ಆಗಿದೆ. ಕಾಂಗ್ರೆಸ್ ಇಷ್ಟೊಂದು ಜನಪ್ರಿಯತೆಯನ್ನು ಎಂದಿಗೂ ಪಡೆದಿರಲಿಲ್ಲ ಮತ್ತು ಎಂದಿಗೂ ಪಡೆಯುವುದಿಲ್ಲ. ಕೈಗೆಟುಕದ ದ್ರಾಕ್ಷಿ ಯಾವಾಗಲೂ ಹುಳಿ ಎಂದಷ್ಟೇ ನಾನು ಹೇಳಬಲ್ಲೆ ’’ಎಂದರು.

‘ಸಂತರ ವೇಷದ ಅತ್ಯಾಚಾರಿಗಳು ’ಎಂಬ ಹೇಳಿಕೆಗಾಗಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಟೀಕಿಸಿದ ಅವರು,‘‘ ಅವರ ಪಕ್ಷವೇ ಅವರಿಗೆ ಮಹತ್ವವನ್ನು ನೀಡುತ್ತಿಲ್ಲ. ನಾವೇಕೆ ಪ್ರತಿಕ್ರಿಯಿಸಬೇಕು? ಮುಂಬೈ ಭಯೋತ್ಪಾದಕ ದಾಳಿಗಳ ಬಳಿಕ ಅವರ ಮನಃಸ್ಥಿತಿಯನ್ನು ನಾವು ನೋಡಿದ್ದೇವೆ. ಆಗಿನಿಂದಲೂ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ’’ ಎಂದರು.

ಕೇಸರಿ ಬಟ್ಟೆಗಳನ್ನು ಧರಿಸಿದ ಜನರು ದೇವಾಲಯಗಳಲ್ಲಿಯೂ ಅತ್ಯಾಚಾರಗಳನ್ನು ನಡೆಸುತ್ತಿದ್ದಾರೆ ಎಂದು ಮಂಗಳವಾರ ಭೋಪಾಲದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳುವ ಮೂಲಕ ಸಿಂಗ್ ವಿವಾದವನ್ನು ಸೃಷ್ಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News