ಒದ್ದೆ ಬಟ್ಟೆಗಳನ್ನು ಒಣಗಿಸಿ ವಿದ್ಯುತ್ ಉತ್ಪಾದನೆ !

Update: 2019-09-19 14:37 GMT

ಕೋಲ್ಕತಾ,ಸೆ.19: ಖರಗಪುರ ಐಐಟಿಯ ಸಂಶೋಧಕರು ಒದ್ದೆ ಬಟ್ಟೆಗಳನ್ನು ತೆರೆದ ಜಾಗದಲ್ಲಿ ಒಣಗಿಸುವ ಮೂಲಕ ವಿದ್ಯುತ್ ಉತ್ಪಾದಿಸುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿದ್ದಾರೆ.

 ಗ್ರಾಮವೊಂದರಲ್ಲಿ ಇತ್ತೀಚಿಗೆ ಈ ತಂತ್ರಜ್ಞಾನವನ್ನು ಪರೀಕ್ಷೆಗೆ ಒಡ್ಡಲಾಗಿತ್ತು. ಧೋಬಿಗಳು 3000 ಚ.ಮೀ.ಪ್ರದೇಶದಲ್ಲಿ ಒಣಗಲು ಹಾಕಿದ್ದ ಸುಮಾರು 50 ಒದ್ದೆ ಬಟ್ಟೆಗಳನ್ನು ವಾಣಿಜ್ಯಿಕ ಸುಪರ್‌ ಕೆಪಾಸಿಟರ್ ಜೊತೆಗೆ ಸಂಪರ್ಕಿಸಿದಾಗ ಎಲ್‌ಇಡಿ ಬಲ್ಬನ್ನು ಒಂದು ಗಂಟೆಗೂ ಅಧಿಕ ಕಾಲ ಬೆಳಗಿಸಲು ಸಾಕಾಗುವಷ್ಟು ಸುಮಾರು 10 ವೋಲ್ಟ್ ವಿದ್ಯುತ್ 24 ಗಂಟೆಗಳಲ್ಲಿ ಉತ್ಪಾದನೆಯಾಗಿತ್ತು ಎಂದು ಐಐಟಿ-ಖರಗಪುರ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

“ನಾವು ಧರಿಸುವ ಬಟ್ಟೆಗಳು ಸೆಲ್ಯುಲೋಸ್ ಆಧಾರಿತವಾಗಿದ್ದು,ಪುಟ್ಟ ತಂತುಗಳಂತಹ ನಾಳಗಳ ಜಾಲಬಂಧವನ್ನು ಹೊಂದಿರುತ್ತವೆ. ಲವಣಯುಕ್ತ ನೀರಿನಲ್ಲಿಯ ಅಯಾನುಗಳು ಅಥವಾ ವಿದ್ಯುನ್ಮಾನ ವಿದ್ಯುದಾವೇಶ ಕಣಗಳು ಈ ನಾಳಗಳ ಮೂಲಕ ಸಾಗುವಾಗ ವಿದ್ಯುತ್ತನ್ನು ಉತ್ಪಾದಿಸುತ್ತವೆ” ಎಂದು ಮುಖ್ಯ ಸಂಶೋಧಕ ಸುಮನ್ ಚಕ್ರವರ್ತಿ ಅವರು ವಿವರಿಸಿದ್ದಾರೆ.

ನೈಸರ್ಗಿಕ ವಾತಾವರಣದಲ್ಲಿ ಒಣಗಿಸಲಾದ ಒದ್ದೆ ಬಟ್ಟೆಯು ವಿದ್ಯುತ್ತನ್ನು ಉತ್ಪಾದಿಸಬಲ್ಲದು ಎನ್ನವುದು ಈವರೆಗೆ ಕಲ್ಪನಾತೀತವಾಗಿತ್ತು. ಈ ನೂತನ ತಂತ್ರಜ್ಞಾನವು ದೂರದ ಗ್ರಾಮಗಳಲ್ಲಿ ವಿದ್ಯುತ್ ಅಗತ್ಯವನ್ನು ಪೂರೈಸುವಲ್ಲಿ ಅತ್ಯಂತ ಉಪಯೋಗಿಯಾಗಲಿದೆ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News