"ಇಲ್ಲಿ ಮಾಧ್ಯಮದವರಿಲ್ಲ" ಎಂದು ಸುಳ್ಳು ಹೇಳಿದ ಬ್ರಿಟಿಷ್ ಪ್ರಧಾನಿಯ ಚಳಿ ಬಿಡಿಸಿದ ಸಾಮಾನ್ಯ ಪ್ರಜೆ

Update: 2019-09-19 15:24 GMT

ಲಂಡನ್, ಸೆ.19: ಲಂಡನ್ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ಸಂದರ್ಭ ಸುಳ್ಳು ಹೇಳಿದ ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಗೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವೊಂದರ ತಂದೆ ಎಲ್ಲರೆದುರೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಬ್ರಿಟಿಷ್ ಸರಕಾರ ಅರೋಗ್ಯ ಸೇವೆಗಳಿಗೆ ಅನುದಾನ ಕಡಿತಗೊಳಿಸಿರುವ ಕುರಿತು ಜನರ ದೂರು ಕೇಳಲೆಂದು ಪ್ರಧಾನಿ ಬೋರಿಸ್ ಜಾನ್ಸನ್ ಲಂಡನ್ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವೊಂದರ ತಂದೆ ಪ್ರಧಾನಿಯನ್ನು ತಡೆದು ಅನುದಾನ ಕಡಿತಗೊಳಿಸಿರುವ ಕುರಿತು ತೀವ್ರ ತಕರಾರು ತೆಗೆದರು. ಜೊತೆಗೆ ಈಗ ಕೇವಲ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದೀರಿ ಎಂದು ಮುಲಾಜಿಲ್ಲದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಅನಿರೀಕ್ಷೀತ ತರಾಟೆಯಿಂದ ತಪ್ಪಿಸಿಕೊಳ್ಳಲು ಬೋರಿಸ್ ಜಾನ್ಸನ್ "ಇಲ್ಲಿ ಮಾಧ್ಯಮದವರು ಯಾರೂ ಇಲ್ಲ" ಎಂದು ಬಿಟ್ಟರು. ಆದರೆ ಅವರ ಜೊತೆ ಮಾಧ್ಯಮದ ಜನರಿದ್ದರು ಮತ್ತು ಅವರು ಫೋಟೋ, ವಿಡಿಯೋ ತೆಗೆಯುತ್ತಿದ್ದರು.

ಇದರಿಂದ ಇನ್ನಷ್ಟು ಕೆರಳಿದ ಆ ವ್ಯಕ್ತಿ "ನೀವು ಏನು ಹೇಳುತ್ತಿದ್ದೀರಿ, ಮತ್ತೆ ಇವರೆಲ್ಲ ಯಾರು?" ಎಂದು ಅಲ್ಲಿದ್ದ ಮಾಧ್ಯಮದವರನ್ನು ತೋರಿಸಿದರು. ಅಲ್ಲಿಗೆ ಬ್ರಿಟಿಷ್ ಪ್ರಧಾನಿ ಸಂಪೂರ್ಣ ನಿರುತ್ತರರಾಗಿ ಪ್ರತಿಕ್ರಿಯೆ ನೀಡಲು ತಡವರಿಸಿದರು. ಪ್ರಧಾನಿ ಜೊತೆಗಿದ್ದವರು ಆ ವ್ಯಕ್ತಿಯನ್ನು ಸಮಾಧಾನಪಡಿಸಲು, ಸುಮ್ಮನಿರಲು ಹೇಳಲು ಪ್ರಯತ್ನಿಸಿದರೂ ಆತ ಮಾತ್ರ ಹೇಳಲಿರುವುದನ್ನು ಎಲ್ಲವನ್ನೂ ಹೇಳಿಯೇ ಬಿಟ್ಟ.

ಬೇರೆ ದಾರಿ ಕಾಣದೆ ಮುಖ ಸಪ್ಪೆ ಮಾಡಿಕೊಂಡು ಜಾನ್ಸನ್ ಅಲ್ಲಿಂದ ಮುಂದೆ ಹೋದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನಿ ಸುಳ್ಳು ಹೇಳಿದರು ಎಂದು ಕೆಲವರು ಟೀಕಿಸಿದರೆ ಹಲವರು ಆ ವ್ಯಕ್ತಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News