ಮಹಿಳಾ ಸುರಕ್ಷತೆ ಕುರಿತು ಆದಿತ್ಯನಾಥ್ ಹೇಳಿಕೆಯನ್ನು ಅಣಕಿಸುತ್ತಿದೆ ಅತ್ಯಾಚಾರ ಸಂತ್ರಸ್ತೆಯರ ಹೋರಾಟ

Update: 2019-09-19 17:42 GMT

ಲಕ್ನೋ,ಸೆ.19: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು,ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆ ತನ್ನ ಸರಕಾರದ ಆದ್ಯತೆಯಾಗಿದೆ ಎಂದು ಗುರುವಾರ ಹೇಳಿಕೊಂಡಿದ್ದಾರೆ. ಆದರೆ ಆಡಳಿತ ಬಿಜೆಪಿಯ ನಾಯಕರು ಭಾಗಿಯಾಗಿದ್ದಾರ ಎಂದು ಆರೋಪಿಸಲಾದ ಎರಡು ಪ್ರಮುಖ ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಸಂತ್ರಸ್ತೆಯರು ನಡೆಸುತ್ತಿರುವ ಹೋರಾಟ ಆದಿತ್ಯನಾಥ್ ಹೇಳಿಕೆಯನ್ನು ಅಣಕಿಸುತ್ತಿದೆ.

ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಮುಖ್ಯ ಆರೋಪಿಯಾಗಿರುವ ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದರೆ, ಶಹಜಹಾನ್‌ ಪುರ ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿ ನಾಲ್ಕು ದಿನಗಳು ಕಳೆದಿದ್ದರೂ ಮಾಜಿ ಬಿಜೆಪಿ ಸಚಿವ ಚಿನ್ಮಯಾನಂದ ವಿರುದ್ಧ ಇನ್ನೂ ಅತ್ಯಾಚಾರ ಆರೋಪವನ್ನು ಹೊರಿಸಲಾಗಿಲ್ಲ.

“ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆ ನಮ್ಮ ಸರಕಾರದ ಆದ್ಯತೆಯಾಗಿದೆ. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ತ್ವರಿತಗೊಳಿಸಲಾಗುತ್ತಿದೆ. ತ್ವರಿತ ವಿಚಾರಣೆ ಮತ್ತು ಆರೋಪ ಪಟ್ಟಿ ಸಲ್ಲಿಕೆಗೆ ನಾವು ಆದ್ಯತೆ ನೀಡಿದ್ದೇವೆ” ಎಂದು ಅಧಿಕಾರದಲ್ಲಿ 30 ತಿಂಗಳುಗಳನ್ನು ಪೂರೈಸಿದ ಆದಿತ್ಯನಾಥ್ ಹೇಳಿದರು. ತಾನು ಅಧಿಕಾರ ವಹಿಸಿಕೊಂಡ ಬಳಿಕ ಅತ್ಯಾಚಾರ ಪ್ರಕರಣಗಳು ಶೇ.36ರಷ್ಟು ಕಡಿಮೆಯಾಗಿವೆ. ಸಾಮಾನ್ಯ ಅಪರಾಧ ಪ್ರಕರಣಗಳೂ ಇಳಿಮುಖಗೊಂಡಿವೆ. ಕ್ರಿಮಿನಲ್‌ಗಳನ್ನು ನಿವಾರಿಸಲು ಅಥವಾ ಜೈಲಿಗೆ ಕಳುಹಿಸಲು ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದರು.

ಇತ್ತೀಚಿಗೆ ಸುದ್ದಿಯಲ್ಲಿರುವ ಅತ್ಯಾಚಾರ ಪ್ರಕರಣಗಳ ತನಿಖೆಯಲ್ಲಿನ ಪ್ರಗತಿಗೂ ಆದಿತ್ಯನಾಥ್ ಹೇಳಿಕೆಗೂ ತಾಳೆಯಾಗುತ್ತಿಲ್ಲ. ಚಿನ್ಮಯಾನಂದ ತನ್ನನ್ನು ಬ್ಲಾಕ್‌ಮೇಲ್ ಮಾಡಿ ಒಂದು ವರ್ಷದಿಂದಲೂ ತನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದ ಎಂದು ಕಾನೂನು ವಿದ್ಯಾರ್ಥಿನಿ ಒಂದು ತಿಂಗಳ ಹಿಂದೆಯೇ ಆರೋಪಿಸಿದ್ದರೂ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿಲ್ಲ. ಕೇವಲ ಬ್ಲ್ಯಾಕ್‌ಮೇಲ್ ಮತ್ತು ಅಪಹರಣ ಆರೋಪಗಳನ್ನು ಹೊರಿಸಲಾಗಿದೆ.

ಉನ್ನಾವೊ ಪ್ರಕರಣದಲ್ಲಿ ಒಂದು ವರ್ಷದ ಬಳಿಕ,ಅದೂ ಸಂತ್ರಸ್ತೆಯ ತಂದೆಯ ಹತ್ಯೆಯ ನಂತರ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News