ಉಗ್ರರ ಭೀತಿಯ ಹೊರತಾಗಿಯೂ ಪಾಕ್ ಪ್ರವಾಸ ಕೈಗೊಳ್ಳಲು ಲಂಕಾ ನಿರ್ಧಾರ

Update: 2019-09-19 18:16 GMT

ಕೊಲಂಬೊ, ಸೆ.19: ಆರು ಪಂದ್ಯಗಳ ಸೀಮಿತ ಓವರ್ ಕ್ರಿಕೆಟ್ ಸರಣಿಯ ವೇಳೆ ಆಟಗಾರರು ಉಗ್ರರ ದಾಳಿಗೆ ತುತ್ತಾಗುವ ಭೀತಿಯಿರುವ ಹೊರತಾಗಿಯೂ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಗುರುವಾರ ನಿರ್ಧರಿಸಿದೆ.

‘‘ಮಂಗಳವಾರ ಪಾಕಿಸ್ತಾನಕ್ಕೆ ತೆರಳಲು ರಕ್ಷಣಾ ಸಚಿವರಿಂದ ನಾವು ಹಸಿರು ನಿಶಾನೆ ಪಡೆದಿದ್ದೇವೆ. ಪಾಕ್ ಪ್ರವಾಸ ನಾವು ಯೋಜಿಸಿದಂತೆಯೇ ನಡೆಯಲಿದೆ. ನಾನು ಹಾಗೂ ನಮ್ಮ ಕಚೇರಿ ಸಿಬ್ಬಂದಿ ತಂಡಕ್ಕೆ ಸಾಥ್ ನೀಡಲಿದ್ದೇವೆ’’ ಎಂದು ಶ್ರೀಲಂಕಾ ಕ್ರಿಕೆಟ್ ಕಾರ್ಯದರ್ಶಿ ಮೋಹನ್ ಡಿಸಿಲ್ವಾ ಹೇಳಿದ್ದಾರೆ.

ಲಂಕಾ ಆಟಗಾರರ ಮೇಲೆ ಪಾಕ್‌ನಲ್ಲಿ ಉಗ್ರರ ದಾಳಿಯಾಗುವ ಸಾಧ್ಯತೆಯಿದೆ ಎಂದು ಕಳೆದ ವಾರ ವರದಿಯಾದ ಬಳಿಕ ರಕ್ಷಣಾ ಸಚಿವಾಲಯ ತನಿಖೆಗೆ ಶಿಫಾರಸು ಮಾಡಿತ್ತು. 2009ರಲ್ಲಿ ಲಾಹೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ತಂಡವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಲಂಕಾದ ಆರು ಆಟಗಾರರು ಗಾಯಗೊಂಡಿದ್ದರು. ಪಾಕಿಸ್ತಾನದ ಆರು ಪೊಲೀಸರು ಹಾಗೂ ಇಬ್ಬರು ನಾಗರಿಕರು ಮೃತಪಟ್ಟಿದ್ದರು.

ಭದ್ರತೆಯ ಭೀತಿಯಿಂದಾಗಿ ಶ್ರೀಲಂಕಾದ 10 ಹಿರಿಯ ಆಟಗಾರರು ಪಾಕ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಶ್ರೀಲಂಕಾ ಈಗಾಗಲೇ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿಗೆ ತಂಡವನ್ನು ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News