ನಿಮಗೆ ಗೊತ್ತಿರಲಿ, ಆಧಾರ್ ಕಾರ್ಡ್‌ನ ಈ ವಿವರಗಳನ್ನು ಅಪ್‌ಡೇಟ್ ಮಾಡಲು ಯಾವುದೇ ದಾಖಲೆಗಳು ಬೇಕಾಗಿಲ್ಲ

Update: 2019-09-20 12:44 GMT

ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿವರಗಳು ಸರಿಯಾಗಿರುವುದು ಮತ್ತು ಅಗತ್ಯವಾದಾಗ ಅವುಗಳನ್ನು ಅಪ್‌ಡೇಟ್ ಮಾಡುವುದು ತುಂಬ ಮುಖ್ಯವಾಗಿದೆ. ಇದರಿಂದ ನೀವು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ದ ವೆಬ್‌ಸೈಟ್‌ನ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಆಧಾರ್‌ನ್ನು ಡೌನ್‌ ಲೋಡ್ ಮಾಡಿಕೊಳ್ಳುವುದು, ಮರುಮುದ್ರಣಕ್ಕೆ ಬೇಡಿಕೆ ಸಲ್ಲಿಸುವುದು ಇತ್ಯಾದಿಗಳು ಈ ಸೇವೆಗಳಲ್ಲಿ ಒಳಗೊಂಡಿವೆ. ನಿಮ್ಮ ಮೊಬೈಲ್ ಸಂಖ್ಯೆ ಯುಐಡಿಎಐನಲ್ಲಿ ನೋಂದಣಿಯಾಗಿದ್ದರೆ ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್)ಗಳನ್ನು ದೃಢೀಕರಿಸಿಕೊಳ್ಳಲು ನೀವು ಆಧಾರ್ ಒಟಿಪಿ (ಒಂದು ಬಾರಿಯ ಪಾಸ್‌ವರ್ಡ್)ಯನ್ನೂ ಬಳಸಬಹುದು.

ಆಧಾರ್ ಕಾರ್ಡ್‌ನಲ್ಲಿಯ ನಿಮ್ಮ ವಿವರಗಳನ್ನು ಅಪ್‌ಡೇಟ್ ಮಾಡಲು ಅಥವಾ ನವೀಕರಿಸಲು ನೀವು ಬಯಸಿದ್ದರೆ ಏನು ಮಾಡಬೇಕು? ಅದಕ್ಕಾಗಿ ಅನುಸರಿಸಬೇಕಾದ ಹೆಜ್ಜೆಗಳಿಲ್ಲಿವೆ...

ಮೊದಲನೆಯದಾಗಿ ನಿಮ್ಮ ಆಧಾರ್‌ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಬೇಕಿದ್ದರೆ ಅದಕ್ಕಾಗಿ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಒದಗಿಸಬೇಕಾದ ಅಗತ್ಯವಿಲ್ಲ.

ಯುಐಡಿಎಐ ಟ್ವೀಟಿಸಿರುವಂತೆ ನಿಮ್ಮ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ,ಇ-ಮೇಲ್ ಐಡಿ,ಭಾವಚಿತ್ರ,ಲಿಂಗ ಮತ್ತು ಬಯೊಮೆಟ್ರಿಕ್ಸ್ ಅನ್ನು ಅಪ್‌ಡೇಟ್ ಮಾಡಲು ಯಾವುದೇ ದಾಖಲೆಗಳ ಅಗತ್ಯವಿಲ್ಲ. ಈ ವಿವರಗಳನ್ನು ಅಪ್‌ಡೇಟ್ ಮಾಡಲು ನಿಮ್ಮ ಆಧಾರ ಕಾರ್ಡ್‌ನೊಂದಿಗೆ ಸಮೀಪದ ಆಧಾರ ಸೇವಾ ಕೇಂದ್ರ (ಎಎಸ್‌ಕೆ)ಕ್ಕೆ ಭೇಟಿ ನೀಡಬಹುದು.

ಸೇವೆಗಳನ್ನು ತ್ವರಿತವಾಗಿ ಪಡೆಯಲು ನೀವು ಎಎಸ್‌ಕೆಯಲ್ಲಿ ಭೇಟಿಗೆ ಸಮಯವನ್ನು ಮೊದಲೇ ನಿಗದಿಪಡಿಸಿಕೊಳ್ಳಬ ಹುದು. ಯುಐಡಿಎಐ ವೆಬ್‌ಸೈಟ್ ಮೂಲಕ ಈ ಕೆಲಸವನ್ನು ಮಾಡಬಹುದು.

ಆದರೆ ಹೆಸರು,ವಿಳಾಸ ಮತ್ತು/ಅಥವಾ ಜನ್ಮ ದಿನಾಂಕದಂತಹ ವಿವರಗಳನ್ನು ಅಪ್‌ಡೇಟ್ ಮಾಡಲು ನೀವು ಸೂಕ್ತ ದಾಖಲೆಗಳನ್ನು ಆಧಾರ ಸೇವಾ ಕೇಂದ್ರಕ್ಕೆ ಸಲ್ಲಿಸಬೇಕಾಗುತ್ತದೆ.

  ಆಧಾರ್ ಕಾರ್ಡ್‌ನಲ್ಲಿಯ ನಿಮ್ಮ ಹೆಸರನ್ನು ಸರಿಪಡಿಸಬೇಕಿದ್ದರೆ ನೀವು ಪಾಸ್‌ಪೋರ್ಟ್, ಪಾನ್ ಅಥವಾ ಇತರ ಯಾವುದೇ ಸೂಕ್ತ ದಾಖಲೆಯನ್ನು ಒದಗಿಸಬೇಕು. ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಅಪ್‌ಡೇಟ್ ಮಾಡಲು ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿ,ವಾಹನ ಚಾಲನೆ ಪರವಾನಿಗೆ ಇತ್ಯಾದಿಗಳನ್ನು ಬಳಸಬಹುದು.

  ಆಧಾರ್ ಸೇವಾ ಕೇಂದ್ರಗಳಲ್ಲಿ ಈ ವಿವರಗಳನ್ನು ಅಪ್‌ಡೇಟ್ ಮಾಡಲು ನೀವು 50 ರೂ.ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ನೆನಪಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News