ಬಂಟ್ವಾಳ: ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ

Update: 2019-09-21 10:51 GMT

 ಬಂಟ್ವಾಳ, ಸೆ. 21: ಪುರಸಭಾ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ 'ಪೋಷಣ್ ಅಭಿಯಾನ ಮಾಸಾಚರಣೆ' ಕಾರ್ಯಕ್ರಮ ಬಿಸಿರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.

ಬಂಟ್ವಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಾಣಿಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿನಬಳಕೆಯ ಆಹಾರದ ಕ್ರಮದ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು.
 ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಂದ ಮಾತ್ರ ಸುಂದರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಹಿಳೆಯು ಆರೋಗ್ಯ, ಆರ್ಥಿಕವಾಗಿ ಸಬಲರಾದಾಗ ಅಂತಹ ಕುಟುಂಬ ಸಮರ್ಥವಾಗಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಉಸ್ಮಾನ್ ಮಾತನಾಡಿ, ಹೆಣ್ಣು ಮಕ್ಕಳ ಅನುಪಾತದಲ್ಲಿ ಏರುಪೇರು ಆಗಬಾರದೆಂಬ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ. ಇಲಾಖೆಯ ಎಲ್ಲ ಯೋಜನೆಗಳ ಪ್ರಯೋಜಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ವೇದಿಕೆಯಲ್ಲಿ ಹಿರಿಯ ಮೇಲ್ವಿಚಾರಕಿ ಉಷಾ ಕುಮಾರಿ, ಸಹಕಾರಿ ಒಕ್ಕೂಟದ ಅಧ್ಯಕ್ಷೆ ವಸಂತಿ, ಮೇಲ್ವಿಚಾರಕಿ ಇಂದಿರಾ ಉಪಸ್ಥಿತರಿದ್ದರು. ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಪ್ರಸ್ತಾವಿಸಿದರು. ಪುರಸಭಾ ಯೋಜನಾ ಸಂಘಟಕಿ ಉಮಾವತಿ ಸ್ವಾಗತಿಸಿದರು. ಮೇಲ್ವಿಚಾರಕಿ ಇಂದಿರಾ ವಂದಿಸಿದರು. ಹಿರಿಯ ಮೇಲ್ಬಿಚಾರಕಿ ಬಿ.ಭಾರತಿ ಕಾರ್ಯಕ್ರಮ ನಿರೂಪಿಸಿದರು.

ಸೀಮಂತ ಕಾರ್ಯಕ್ರಮ:
ಇದೇ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಸುಮಾರು 15 ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನದ ಬಗ್ಗೆ ಕಾರ್ಯಕರ್ತೆಯರಿಂದ ಕಿರು ನಾಟಕ ಪ್ರದರ್ಶನ ನಡೆಯಿತು.

ಆರಂಭದಲ್ಲಿ ಸ್ತ್ರೀ ಶಕ್ತಿಯ ವಿವಿಧ ಸಂಘಟನೆಯ ಸದಸ್ಯರು ಹಾಗೂ ಪುರಸಭೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಜಾಥಾದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News