ಬಂಟ್ವಾಳ ಪುರಸಭೆಯ ಪೌರಕಾರ್ಮಿಕರೊಂದಿಗೆ ಸಂವಾದ-ಸಹಭೋಜನ

Update: 2019-09-21 13:03 GMT

ಬಂಟ್ವಾಳ, ಸೆ. 21: ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಮಂಗಳೂರಿನ ಎ.ಜೆ.ಆಸ್ಪತ್ರೆಯಿಂದ ಆರೋಗ್ಯ ಕಾರ್ಡ್ ದೊರಕಿಸಿ ಕೊಡಲು ಮಾತುಕತೆ ನಡೆಸಲಾಗಿದ್ದು, ವಾರದೊಳಗೆ ಎಲ್ಲರಿಗೂ ಆರೋಗ್ಯ ಕಾರ್ಡ್ ಸಿಗಲಿದೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.

ಅವರು ಶನಿವಾರ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿರುವ ಸೇವಾ ಕಾರ್ಯದಲ್ಲಿ ದ.ಕ.ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಎಂಬಂತೆ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿದರು. 

ಬಳಿಕ ಮಾತನಾಡಿದ ಶಾಸಕರು, ಪೌರ ಕಾರ್ಮಿಕರ ಕೆಲಸ ದೇವರ ಕೆಲಸಕ್ಕೆ ಸಮಾನಾಗಿದ್ದು, ಹೀಗಾಗಿ ಅವರು ಸಮರ್ಪಕವಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಜನತೆ ಆರೋಗ್ಯವಾಗಿರಲು ಸಾಧ್ಯ. ಬಂಟ್ವಾಳ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಯಾವುದೇ ಸಮಸ್ಯೆಗಳಿದ್ದರೂ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.

ಪುರಸಭೆಯಲ್ಲಿ ಸ್ಥಳೀಯ ಕಾರ್ಮಿಕರ ಜತೆಗೆ ಹೊರ ಜಿಲ್ಲೆಯ ಕಾರ್ಮಿಕರು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪಡಿತರ ಚೀಟಿ ಸಮಸ್ಯೆಗೆ ಪರಿಹಾರ, ಬಾಡಿಗೆ ಮನೆಯಲ್ಲಿರುವ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಜತೆಗೆ ಕಾರ್ಮಿಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ತೊಂದರೆಯಾಗಿರುವ ಕುರಿತು ತನ್ನ ಗಮನಕ್ಕೆ ಬಂದರೆ ಅವರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರು ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಜತೆಗೆ ಕಾರ್ಮಿಕರ ಪೂರ್ಣ ವಿವರವನ್ನು ತನಗೆ ನೀಡುವಂತೆ ಕಾರ್ಮಿಕ ಪ್ರಮುಖರಲ್ಲಿ ತಿಳಿಸಿದರು. 

ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕಾರ್ಮಿಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ, ನಿಮ್ಮ ಸೌಲಭ್ಯಗಳೂ ಉತ್ತಮವಾಗಿರುತ್ತದೆ. ನೀವು ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೆ ಶಾಸಕರಿಗೂ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಅಂತಹ ಗೊಂದಲಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಲು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು, ಹರಿಪ್ರಸಾದ್, ದೇವಕಿ, ರೇಖಾ ಪೈ, ಮೀನಾಕ್ಷಿ, ಶಶಿಕಲಾ, ಬಿಜೆಪಿ ಪ್ರಮುಖರಾದ ಜಿ.ಆನಂದ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಸುದರ್ಶನ್ ಬಜ ಮೊದಲಾದವರಿದ್ದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. 

ಸಹಭೋಜನಾ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಪುರಸಭೆಯ ಸುಮಾರು 48 ಮಂದಿ ಪೌರಕಾರ್ಮಿಕರನ್ನು ಶಾಲು ಹಾಕಿ ಗೌರವಿಸಲಾಯಿತು. ಜೊತೆಗೆ ಕಸವಿಲೇವಾರಿಗೆ ಅನುಕೂಲವಾಗುವಂತೆ ಗ್ಲೌಸ್, ಕನ್ನಡಕ ಮೊದಲಾದ ಸೌಲಭ್ಯಗಳನ್ನು ವಿತರಿಸಲಾಯಿತು. ಸ್ವತಃ ಶಾಸಕರೇ ಬಡಿಸಿ ಪೌರಕಾರ್ಮಿಕರೊಂದಿಗೆ ಸಹಭೋಜನ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News