ಹ್ಯೂಸ್ಟನ್ ನಲ್ಲಿ ಸರಳತೆ ಮೆರೆದ ಪ್ರಧಾನಿ ಮೋದಿ

Update: 2019-09-22 07:06 GMT

ಹೊಸದಿಲ್ಲಿ, ಸೆ.22: ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿವಾರ ಹ್ಯೂಸ್ಟನ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದಾಗ, ಅವರಿಗೆ ಅರ್ಪಿಸಲಾದ ಪುಷ್ಪಗುಚ್ಚದಿಂದ ಕೆಳಕ್ಕೆ ಉದುರಿದ ಹೂವನ್ನು ಎತ್ತಿಕೊಳ್ಳುವ ತನ್ನ ಸರಳತೆಯನ್ನು ತೋರಿಸಿದರು. ಮೋದಿ ಅವರ ಸ್ವಚ್ಛತೆಯ ಪಾಠವನ್ನು ನೆಟಿಜನ್ ಗಳು ಶ್ಲಾಘಿಸಿದ್ದಾರೆ. 

ಅಮೆರಿಕ ಪ್ರವಾಸದಲ್ಲಿ 'ಹೌಡಿ ಮೋದಿ!' ಮೆಗಾ ರ‍್ಯಾಲಿಯಲ್ಲಿ  ಭಾಗವಹಿಸಲು ಪ್ರಧಾನಿ ಮೋದಿ ಅವರು ಟೆಕ್ಸಾಸ್ ನ ಹ್ಯೂಸ್ಟನ್ ಗೆ ಆಗಮಿಸಿದರು. ಪ್ರಧಾನಿ ಮೋದಿ ತಮ್ಮ ವಿಮಾನದಿಂದ ಇಳಿದ ಕೂಡಲೇ ಅವರಿಗೆ ವಿಮಾನ ನಿಲ್ದಾಣದಲ್ಲಿ ಭಾರತೀಯ ಮತ್ತು ಅಮೆರಿಕದ ಅಧಿಕಾರಿಗಳು ಆತ್ಮೀಯ ಸ್ವಾಗತ ನೀಡಿದರು. ಆಗ ಮಹಿಳಾ ಅಧಿಕಾರಿಯೊಬ್ಬರು ಪುಷ್ಪ ಪುಷ್ಪಗುಚ್ಚ ನೀಡಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.

ಪ್ರಧಾನಿ ಮೋದಿ ಪುಷ್ಪಗುಚ್ಚವನ್ನು ಪಡೆದು ತನ್ನ ಸಿಬ್ಬಂದಿಗೆ ಹಸ್ತಾಂತರಿಸುತ್ತಿದ್ದಂತೆ ಗುಚ್ಚದಿಂದ ಹೂವೊಂದು ಕೆಳಗಡೆ ಬಿತ್ತು. ಇದನ್ನು ಗಮನಿಸಿದ ಪ್ರಧಾನಿ ಮೋದಿ ಬಗ್ಗಿ ತಕ್ಷಣ ಹೂಗಳನ್ನು ಎತ್ತಿಕೊಂಡು ತಮ್ಮ ಭದ್ರತಾ ಸಿಬಂದಿ ಕೈಗೆ ನೀಡಿದರು. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಮೋದಿಯವರ ಈ ರೀತಿಯ ನಡೆ ಸೋಷಿಯಲ್ ಮೀಡಿಯಾದಲ್ಲಿ ಅನೇಕರನ್ನು ಆಕರ್ಷಿಸಿದೆ, ಪ್ರಧಾನಮಂತ್ರಿಯವರು ಈ ರೀತಿ ಮಾಡಿರುವುದು 'ಸ್ವಚ್ಛತಾ ಅಭಿಯಾನ' ವೇ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 'ಹೌಡಿ ಮೋದಿ!' ಎಂಬ ಮೆಗಾ ರ‍್ಯಾಲಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೆಪ್ಟೆಂಬರ್ 22 ರವಿವಾರ ಎನ್ ಆರ್ ಜಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸುಮಾರು 50,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News