ಕರೆ ಮಾಡಿ ನಿಂದಿಸಿದ ಕೇಂದ್ರ ಸಚಿವ ಸುಪ್ರಿಯೋ: ‘ಟೆಲಿಗ್ರಾಫ್’ ಸಂಪಾದಕರ ಆರೋಪ

Update: 2019-09-22 18:11 GMT

ಕೋಲ್ಕತಾ, ಸೆ.22: ಗುರುವಾರ ಜಾಧವ್‌ಪುರ್ ವಿವಿಯಲ್ಲಿ ನಡೆದ ದಾಂಧಲೆ ಘಟನೆಯ ಬಗ್ಗೆ ಪತ್ರಿಕೆಯಲ್ಲಿ ಬಂದ ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ತನಗೆ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ‘ದಿ ಟೆಲಿಗ್ರಾಫ್’ ಪತ್ರಿಕೆಯ ಸಂಪಾದಕ ಆರ್ ರಾಜಗೋಪಾಲ್ ಆರೋಪಿಸಿದ್ದಾರೆ.

 ಪತ್ರಿಕೆಯಲ್ಲಿ ಬಂದಿರುವ ವರದಿಯ ಬಗ್ಗೆ ಆಕ್ಷೇಪಗಳಿದ್ದರೆ ಅದನ್ನು ಸೂಕ್ತ ಪ್ರಕ್ರಿಯೆಯ ಮೂಲಕ ವ್ಯಕ್ತಪಡಿಸಬಹುದು. ಈ ಬಗ್ಗೆ ಸ್ಪಷ್ಟನೆ ನೀಡಿದರೆ ಪ್ರಕಟಿಸಬಹುದು ಎಂದು ತಾನು ತಿಳಿಸಿದಾಗ ಸಚಿವರು ಆಕ್ರೋಶಿತರಾಗಿ ಕೆಟ್ಟ ಪದ ಬಳಸಿ ನಿಂದಿಸಿದರು ಎಂದು ರಾಜಗೋಪಾಲ್ ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಸುಪ್ರಿಯೊ, ವರದಿಯ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದಾಗ ಸಂಪಾದಕರು ಅಸಭ್ಯ ಭಾಷೆ ಬಳಸಿ ತನ್ನನ್ನು ನಿಂದಿಸಿದ್ದಾರೆ ಎಂದು ಪ್ರತ್ಯಾರೋಪಿಸಿದ್ದಾರೆ. ಜಾಧವ್‌ಪುರ ವಿವಿಯಲ್ಲಿ ನಡೆದ ಹಿಂಸಾತ್ಮಕ ಘಟನೆಯ ಸಂದರ್ಭ ಸುಪ್ರಿಯೊ ಮೊಣಕೈಯಿಂದ ಒಬ್ಬನಿಗೆ ಹೊಡೆದಿದ್ದಾರೆ ಎಂದು ಪತ್ರಿಕೆಯ ಶನಿವಾರದ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು ನಿರಾಕರಿಸಿದ್ದ ಸುಪ್ರಿಯೊ, ಈ ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ಪತ್ರಿಕೆ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮೊಕದ್ದಮೆ ದಾಖಲಿಸುವುದಾಗಿ ಟ್ವೀಟ್ ಮೂಲಕ ಎಚ್ಚರಿಸಿದ್ದರು.

 ಕೆಲ ಹೊತ್ತಿನ ಬಳಿಕ ಮತ್ತೊಂದು ಟ್ವೀಟ್ ಮಾಡಿದ್ದ ಸುಪ್ರಿಯೊ, ಸಣ್ಣ ಮಟ್ಟಿನ ಕ್ಷಮೆ ಯಾಚಿಸಿದರೆ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಿಬಿಡುವಾ ಎಂದು ಸಂಪಾದಕರಿಗೆ ಕರೆ ಮಾಡಿದ್ದೆ. ಆದರೆ ಅವರು ಅವಾಚ್ಯ ಶಬ್ದ ಬಳಸಿ ನಿಂದಿಸಿ, ರವಿವಾರ ಮತ್ತೊಂದು ಲೇಖನ ಬರೆಯುವುದಾಗಿ ತಿಳಿಸಿದರು. ಅವರ ದುರಹಂಕಾರ ಮನರಂಜಿಸಿತು ಎಂದು ಹೇಳಿದ್ದಾರೆ. ಪತ್ರಿಕೆಯ ಶುಕ್ರವಾರದ ಸಂಚಿಕೆಯ ಮುಖಪುಟದಲ್ಲಿ ಸುಪ್ರಿಯೊ ವ್ಯಕ್ತಿಯೊಬ್ಬನ ಶರ್ಟ್ ಹಿಡಿದಿರುವ ಚಿತ್ರ ಪ್ರಕಟವಾಗಿದ್ದು ‘ಜಾದವ್‌ಪುರ ವಿವಿಯಲ್ಲಿ ಬಾಬುಲ್’ ಎಂಬ ಶೀರ್ಷಿಕೆ ನೀಡಲಾಗಿತ್ತು.

    ಈ ಮಧ್ಯೆ, ಟೆಲಿಗ್ರಾಫ್ ಪತ್ರಿಕೆಯ ರವಿವಾರದ ಸಂಚಿಕೆಯಲ್ಲಿ ಫೋನ್ ಸಂಭಾಷಣೆಯನ್ನು ಉಲ್ಲೇಖಿಸಿ ವರದಿ ಪ್ರಕಟವಾಗಿದೆ. ಸಚಿವರು ಒಬ್ಬನಿಗೆ ಮೊಣಕೈಯಲ್ಲಿ ತಿವಿದಿರುವ ಕುರಿತ ಯಾವುದೇ ವರದಿ ಶುಕ್ರವಾರದ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ. ಇದನ್ನೇ ಫೋನ್ ಸಂಭಾಷಣೆಯ ಸಂದರ್ಭ ಸಚಿವರಿಗೆ ತಿಳಿಸಿದಾಗ ಅವರು ವ್ಯಕ್ತಿಯೊಬ್ಬನ ಶರ್ಟ್ ಹಿಡಿದಿರುವ ಫೋಟೊ ಹಾಗೂ ಇದಕ್ಕೆ ಜಾಧವ್‌ಪುರ ವಿವಿಯಲ್ಲಿ ಬಾಬುಲ್ ಎಂಬ ಶೀರ್ಷಿಕೆ ನೀಡಿದ ಬಗ್ಗೆ ಆಕ್ಷೇಪಿಸಿದರು ಎಂದು ರವಿವಾರದ ಸಂಚಿಕೆಯ ವರದಿ ತಿಳಿಸಿದೆ.

ತಾನೊಬ್ಬ ಕೇಂದ್ರ ಸಚಿವ ಎಂದು ಸುಪ್ರಿಯೊ ಎಚ್ಚರಿಸುವ ಧ್ವನಿಯಲ್ಲಿ ತಿಳಿಸಿದಾಗ , “ನೀವೊಬ್ಬ ಕೇಂದ್ರ ಸಚಿವರಾಗಿರಬಹುದು. ಆದರೆ ನಾನೂ ಕೂಡಾ ಈ ದೇಶದ ಪ್ರಜೆ ಎಂದು ಅವರಿಗೆ ಉತ್ತರಿಸಿದ್ದೆ” ಎಂದು ಸಂಪಾದಕರು ತಿಳಿಸಿದ್ದಾರೆ. ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸುಪ್ರಿಯೊ, “ನೀವು ನಿಮ್ಮನ್ನೇ ಮಾರಿಕೊಂಡಿದ್ದೀರಾ” ಎಂದು ಕೂಗಾಡಿದರಲ್ಲದೆ ಅವಾಚ್ಯವಾಗಿ ನಿಂದಿಸಿ ಬೆದರಿಸಿದರು ಎಂದು ರವಿವಾರ ಪ್ರಕಟವಾದ ಲೇಖನದಲ್ಲಿ ಸಂಪಾದಕ ರಾಜಗೋಪಾಲ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News