ಆರು ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 1.59 ರೂ.,ಡೀಸೆಲ್‌ಗೆ 1.31 ರೂ.ಏರಿಕೆ

Update: 2019-09-22 14:52 GMT

ಹೊಸದಿಲ್ಲಿ,ಸೆ.22: ಸೌದಿ ಅರೇಬಿಯಾದ ಸರಕಾರಿ ಸ್ವಾಮ್ಯದ ತೈಲ ಉತ್ಪಾದಕ ಸಂಸ್ಥೆ ಸೌದಿ ಅರಾಮ್ಕೋಗೆ ಸೇರಿದ ಎರಡು ಸ್ಥಾವರಗಳ ಮೇಲೆ ಕಳೆದ ವಾರ ನಡೆದಿದ್ದ ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಕಳೆದ ಆರು ದಿನಗಳಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆಯಲ್ಲಿ 1.59 ರೂ. ಮತ್ತು ಡೀಸೆಲ್ ಬೆಲೆಯಲ್ಲಿ 1.31 ರೂ.ಹೆಚ್ಚಳವಾಗಿದೆ. 2017ರಲ್ಲಿ ದೈನಂದಿನ ಬೆಲೆ ಪರಿಷ್ಕರಣೆ ಜಾರಿಗೆ ಬಂದ ನಂತರ ಇದು ಆರು ದಿನಗಳ ಅವಧಿಯಲ್ಲಿ ಗರಿಷ್ಠ ಏರಿಕೆಯಾಗಿದೆ.

ಏರಿಕೆಯ ಸತತ ಆರನೇ ದಿನವಾದ ರವಿವಾರ ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆಯನ್ನು 27 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 18 ಪೈಸೆ ಹೆಚ್ಚಿಸಲಾಗಿದೆ.

ಸೌದಿ ತೈಲ ಸ್ಥಾವರಗಳ ಮೇಲೆ ದಾಳಿಯು ಬೆಲೆ ಏರಿಕೆಗೆ ಕಾರಣವಾಗಿದೆ. ದಾಳಿಯಿಂದಾಗಿ ವಿಶ್ವದ ಅತ್ಯಂತ ದೊಡ್ಡ ತೈಲ ರಫ್ತು ದೇಶವಾಗಿರುವ ಸೌದಿ ಅರೇಬಿಯದಿಂದ ಶೇ.50ರಷ್ಟು ತೈಲಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ.

ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ ಸೌದಿ ಅರೇಬಿಯದ ನೂತನ ತೈಲ ಸಚಿವ ಪ್ರಿನ್ಸ್ ಅಬ್ದುಲಝೀಝ್ ಬಿನ್ ಸಲ್ಮಾನ್ ಅವರೊಂದಿಗೆ ಇಂಧನ ಪೂರೈಕೆ ಕುರಿತು ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ತೈಲ ಪೂರೈಕೆಯಲ್ಲಿ ಸಂಭಾವ್ಯ ವ್ಯತ್ಯಯದ ಹಿನ್ನೆಲೆಯಲ್ಲಿ ಭಾರತ ಪೆಟ್ರೋಲಿಯಂ ಕಾರ್ಪೊರೇಷನ್‌ಲಿ.ಈಗಾಗಲೇ ಅಕ್ಟೋಬರ್‌ನಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲದ ಪೂರೈಕೆಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News