ಈಜಿಪ್ಟ್ ಅಧ್ಯಕ್ಷ ಅಲ್-ಸಿಸಿ ಪದಚ್ಯುತಿಗೆ ಬೀದಿಗಿಳಿದ ಪ್ರಜೆಗಳು: ಈ ಹೋರಾಟಕ್ಕೆ ಕಾರಣವಾದ ಅಲಿ ಯಾರು ಗೊತ್ತಾ?

Update: 2019-09-22 15:39 GMT

ಕೈರೋ, ಸೆ.22: ಈಜಿಪ್ಟ್ ನ ಹಲವಾರು ನಗರಗಳಲ್ಲಿ ಶುಕ್ರವಾರ ಬೃಹತ್ ರ್ಯಾಲಿಗಳನ್ನು ನಡೆಸಿರುವ ಜನರು ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಕಟ್ಟಡ ನಿರ್ಮಾಣ ಗುತ್ತಿಗೆದಾರ ಮತ್ತು ನಟ ಮುಹಮ್ಮದ್ ಅಲಿ ಎಂಬವರ ಕರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಂತರ ಜನರು ಬೀದಿಗಿಳಿದಿದ್ದರು. ಈಜಿಪ್ಟ್ ಅಧ್ಯಕ್ಷರು ಮತ್ತು ಸೇನೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅಲಿ ಆರೋಪಿಸಿದ್ದಾರೆ.

ಮುಹಮ್ಮದ್ ಅಲಿ

ಸ್ವಯಂ ದೇಶಭ್ರಷ್ಟರಾಗಿ ಈಗ ಸ್ಪೇನ್‌ ನಲ್ಲಿ ವಾಸವಿರುವ ಅಲಿ, ತಾನು 15 ವರ್ಷಗಳ ಕಾಲ ಸೇನೆಯ ಹಲವಾರು ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸಿದ್ದೇನೆ. ಇದು ತನಗೆ ಸೇನೆಯಲ್ಲಿ ಹಣಕಾಸನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಲು ಅವಕಾಶ ನೀಡಿತ್ತು ಎಂದಿದ್ದಾರೆ.

ಅಲ್-ಸಿಸಿ ಮತ್ತು ಸೇನೆ ಅರಮನೆಗಳು, ಬಂಗಲೆಗಳು ಮತ್ತು ಹೋಟೆಲ್ ‌ಗಳ ನಿರ್ಮಾಣಕ್ಕಾಗಿ ಮಿಲಿಯಾಂತರ ಡಾಲರ್ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಅಲಿ ಆನ್‌ ಲೈನ್ ‌ನಲ್ಲಿ ತಾನು ಪೋಸ್ಟ್ ಮಾಡಿರುವ ಸರಣಿ ವೀಡಿಯೊಗಳಲ್ಲಿ ಆರೋಪಿಸಿದ್ದಾರೆ.

ಮಂಗಳವಾರ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ‘ನಿಮ್ಮ ಸಮಯ ಮುಗಿಯುತ್ತಿದೆ ’ ಎಂದು ಅಲ್-ಸಿಸಿಯವರನ್ನುದ್ದೇಶಿಸಿ ಹೇಳಿದ್ದ ಅಲಿ, ಶುಕ್ರವಾರ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುವಂತೆ ಈಜಿಪ್ಟ್ ಪ್ರಜೆಗಳಿಗೆ ಕರೆ ನೀಡಿದ್ದರು. ಕಳೆದ ವಾರ ಯುವ ಸಮಾವೇಶವೊಂದರಲ್ಲಿ ಮಾತನಾಡಿದ ಸಂದರ್ಭ ಅಲ್-ಸಿಸಿ, ಸೇನೆಯಲ್ಲಿ ಮತ್ತು ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪಗಳು ಹಸಿಸುಳ್ಳುಗಳು ಮತ್ತು ಅಪನಿಂದೆಗಳಾಗಿವೆ ಹಾಗೂ ಇವು ಮಾನಹಾನಿಗೆ ಸಮನಾಗಿವೆ ಎಂದು ಸಮಜಾಯಿಷಿ ನೀಡಿದ್ದರು.

ಅಲಿ, ಈಜಿಪ್ಟ್ ಅಧಿಕಾರಿಗಳು ಬಿಲಿಯಗಟ್ಟಲೆ ಈಜಿಪ್ಟಿಯನ್ ಪೌಂಡ್‌ ಗಳನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪದೊಂದಿಗೆ ಈ ತಿಂಗಳ ಆರಂಭದಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಲು ಶುರು ಮಾಡಿದ್ದರು. ಸೆ.2ರಂದು ಅವರು ತನ್ನ ಫೇಸ್‌ ಬುಕ್ ಪೇಜ್ ‌ನಲ್ಲಿ ಪೋಸ್ಟ್ ಮಾಡಿದ್ದ ಮೊದಲ ವೀಡಿಯೋವನ್ನು 17 ಲಕ್ಷ ಜನರು ವೀಕ್ಷಿಸಿದ್ದರು. ಆಗಿನಿಂದ ಅಲಿಯವರನ್ನು ಅಲ್-ಸಿಸಿಯವರ ಪ್ರತಿಸ್ಪರ್ಧಿಯನ್ನಾಗಿಸಿ ಡಝನ್‌ಗಟ್ಟಲೆ ಕಾರ್ಟೂನ್‌ಗಳು ಸೃಷ್ಟಿಯಾಗಿವೆ. ಜೊತೆಗೆ ಅಲಿಯನ್ನು 19ನೇ ಶತಮಾನದಲ್ಲಿ ಈಜಿಪ್ಟನ್ನು ಆಳಿದ್ದ ಒಟ್ಟೊಮನ್ ಯುಗದ ಸೇನಾಧಿಪತಿ ಮುಹಮ್ಮದ್ ಅಲಿಯ ಪುನರಾವತಾರವೆಂಬಂತೆಯೂ ಚಿತ್ರಿಸಲಾಗುತ್ತಿದೆ.

ಅಲಿ ಸದ್ಯಕ್ಕೆ ಈಜಿಪ್ಟ್ ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಮಿಲಿಯಗಟ್ಟಲೆ ಜನರು ಅವರ ವೀಡಿಯೊಗಳನ್ನು ವೀಕ್ಷಿಸಿದ್ದಾರೆ. ಅವರ ಅಲ್-ಸಿಸಿ ವಿರೋಧಿ ಹ್ಯಾಷ್‌ ಟ್ಯಾಗ್ ‌ಗಳು ವೈರಲ್ ಆಗಿವೆ. ಇದು ಒಂದು ರೀತಿಯಲ್ಲಿ ಅಲ್-ಸಿಸಿ ಸರಕಾರಕ್ಕೆ ಶಾಸನಬದ್ಧ ಬೆದರಿಕೆಯಾಗಿದೆ. ಇದು ಶಾಸನಬದ್ಧವಾಗಿರದಿದ್ದರೆ ಅಲ್-ಸಿಸಿ ಕಳೆದ ವಾರದ ಯುವ ಸಮಾವೇಶದಲ್ಲಿ ಅಲಿಗೆ ನೇರವಾಗಿ ಉತ್ತರಿಸುತ್ತಿದ್ದರು ಎಂದು ದೋಹಾ ಇನ್‌ಸ್ಟಿಟ್ಯೂಟ್ ಆಫ್ ಗ್ರಾಜ್ಯುಯೇಟ್ ಸ್ಟಡೀಸ್ ‌ನಲ್ಲಿ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಮುಹಮ್ಮದ್ ಅಲ್‌ ಮಸ್ರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ .

ಸರಕಾರಿ ವ್ಯವಸ್ಥೆಯೊಳಗಿನ ಭ್ರಷ್ಟಾಚಾರದ ಬಗ್ಗೆ ಈಜಿಪ್ಟ್ ನಾಗರಿಕರಿಗೂ ಗೊತ್ತಿದೆ. ಸರಕಾರದ ವಿರುದ್ಧ ಪ್ರತಿಭಟನೆಗಿಳಿಯಲು ಅವರಿಗೆ ಪ್ರೇರಣೆಯ ಅಗತ್ಯವಿತ್ತು ಮತ್ತು ಅಲಿ ಅದನ್ನು ನೀಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News