ನಕಲಿ ಎನ್‌ಕೌಂಟರ್ ವಿರುದ್ಧ ಪ್ರತಿಭಟಿಸಿದ ಹೋರಾಟಗಾರ್ತಿಯರ ವಿರುದ್ಧ ಎಫ್‌ಐಆರ್

Update: 2019-09-22 16:07 GMT

ರಾಯ್‌ಪುರ,ಸೆ.22: ನಕಲಿ ಎನ್‌ಕೌಂಟರ್ ವಿರುದ್ಧ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ ಬುಡಕಟ್ಟು ಸಮುದಾಯಗಳ ಹಕ್ಕುಗಳ ಹೋರಾಟಗಾರ್ತಿ ಸೋನಿ ಸೊರಿ ಮತ್ತು ಸಂಶೋಧಕಿ ಬೇಲ ಭಾಟಿಯ ವಿರುದ್ಧ ಚತ್ತೀಸ್‌ಗಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಚತ್ತೀಸ್‌ಗಡದ ದಾಂತೆವಾಡದಲ್ಲಿ ಸೆಪ್ಟಂಬರ್ 23ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ಆರೋಪಿಸಿ ಇಬ್ಬರು ಮಹಿಳಾ ಹೋರಾಟಗಾರ್ತಿಯರು ಹಾಗೂ ಸುಮಾರು 150-200 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಾಗಿದ್ದು ಇದು ಭಿನ್ನಾಭಿಪ್ರಾಯವನ್ನು ಹೊಸಕಿ ಹಾಕುವ ಪ್ರಯತ್ನ ಎಂದು ಭಾಟಿಯ ಆರೋಪಿಸಿದ್ದಾರೆ. ಪೊಲೀಸರು ಗೊಮಿಯಪಾಲ್ ಗ್ರಾಮದ ಲಚ್ಚು ಮಿದಿಯಮಿ ಮತ್ತು ಪೊದಿಯ ಯುಕೆಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ನಡೆಸಿದ್ದಾರೆ ಮತ್ತು ಅವರಿಗೆ ಮಲಂಗಿರಿ ಪ್ರದೇಶ ಸಮಿತಿಯ ಮಾವೋವಾದಿ ಕಮಾಂಡರ್‌ಗಳ ಹಣೆಪಟ್ಟಿ ಕಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ನಕಲಿ ಎನ್‌ಕೌಂಟರ್ ಖಂಡಿಸಿ ಸೊರಿ ಮತ್ತು ಭಾಟಿಯ ಸೆಪ್ಟಂಬರ್ 16ರಂದು ಗ್ರಾಮಸ್ಥರನ್ನು ಜೊತೆಗೂಡಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಎನ್‌ಕೌಂಟರ್‌ಗೊಳಗಾದವರು ಮಾವೋವಾದಿ ಸಂಘಟನೆಗೆ ಸೇರಿದ್ದರು ಮತ್ತು ಅವರ ಮೇಲೆ ತಲಾ ಐದು ಲಕ್ಷ ಬಹುಮಾನ ಘೋಷಿಸಲಾಗಿತ್ತು. ಕಿರಂದುಲ್ ಪೊಲೀಸ್ ಠಾಣೆಗೆ ೆರಾವ್ ಹಾಕುವಂತೆ ಸೊರಿ ಮತ್ತು ಭಾಟಿಯ ಸಮೀಪದ ಗ್ರಾಮಸ್ಥರನ್ನು ಪ್ರಚೋದಿಸಿದ್ದರು ಎಂದು ತಿಳಿಸಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ 188ನೇ ವಿಧಿ (ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ) ಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News