ಹಲ್ಲೆ ಪ್ರಕರಣ ಹಿಂಪಡೆಯಲು ಒತ್ತಡ: ನಿವೃತ್ತ ನ್ಯಾಯಾಧೀಶರ ಸೊಸೆಯ ಆರೋಪ

Update: 2019-09-22 16:18 GMT

ಹೊಸದಿಲ್ಲಿ,ಸೆ.22: ತಮ್ಮ ಮೇಲೆ ಹೊರಿಸಲಾಗಿರುವ ವರದಕ್ಷಿಣೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ಹಿಂಪಡೆದುಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನೂಟಿ ರಮಮೋಹನ್ ರಾವ್ ಅವರ ಸೊಸೆ ಆರೋಪಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ನಿವೃತ್ತ ನ್ಯಾಯಾಧೀಶರ ಸೊಸೆ ಸಿಂಧು ಶರ್ಮಾ ತನ್ನ ಮೇಲೆ ಗಂಡ ಹಾಗೂ ಆತನ ಹೆತ್ತವರು ಹಲ್ಲೆ ನಡೆಸುತ್ತಿರುವ ವೀಡಿಯೊ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ತನ್ನ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಾಕ್ಷಿಯಾಗಿರುವ ವೀಡಿಯೊ ತುಣುಕುಗಳನ್ನು ಅಳಿಸಿ ಹಾಕಲು ಆರೋಪಿಗಳು ಪ್ರಯತ್ನಿಸುತ್ತಿರುವ ವೀಡಿಯೊ ಕ್ಲಿಪಿಂಗ್ ಕೂಡಾ ನನ್ನ ಬಳಿಯಿದೆ. ಅದನ್ನು ಅಗತ್ಯಬಿದ್ದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಶರ್ಮಾ ತಿಳಿಸಿದ್ದಾರೆ.

ಹೈದರಾಬಾದ್ ಕೇಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯುವಂತೆ ತನ್ನ ಹಾಗೂ ತನ್ನ ಮಗಳ ಮೇಲೆ ನಿವೃತ್ತ ನ್ಯಾಯಾಧೀಶರು ಒತ್ತಡ ಹೇರುತ್ತಿದ್ದಾರೆ. ಅದಕ್ಕಾಗಿ ದೊಡ್ಡ ಮೊತ್ತವನ್ನು ನೀಡುವ ಆಮಿಷವನ್ನೂ ಒಡ್ಡಲಾಗಿದೆ. ಇದರಲ್ಲಿ ಹಲವು ಮಧ್ಯವರ್ತಿಗಳು ಮತ್ತು ಪೊಲೀಸರು ಕೈಜೋಡಿಸಿದ್ದು ನೀಡುತ್ತಿರುವ ಹಣವನ್ನು ಪಡೆದು ಪ್ರಕರಣವನ್ನು ಮುಚ್ಚಿಹಾಕುವಂತೆ ನಮ್ಮ ಮನವೊಲಿಸಲು ಪಯತ್ನಿಸುತ್ತಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News