ಚಂದ್ರಯಾನ ವೈಫಲ್ಯಕ್ಕೆ ಶಿವನ್ ಧೋರಣೆ ಕಾರಣ ಎಂದ ತಪನ್ ಮಿಶ್ರ

Update: 2019-09-22 16:28 GMT

ಹೊಸದಿಲ್ಲಿ, ಸೆ.22: ಚಂದ್ರಯಾನ-2 ವೈಫಲ್ಯಕ್ಕೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಧೋರಣೆ ಕಾರಣ ಎಂದು ಇಸ್ರೋದ ಸ್ಪೇಸ್ ಅಪ್ಲಿಕೇಶನ್ ಸೆಂಟರ್‌ನ ಮಾಜಿ ಮುಖ್ಯಸ್ಥ ತಪನ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಓರ್ವ ವ್ಯಕ್ತಿಯ ಕೈಯಲ್ಲಿ ಎಲ್ಲಾ ಅಧಿಕಾರ ಕೇಂದ್ರೀಕೃತಗೊಂಡಿರುವ ಇಸ್ರೋದ ಕೆಲಸದ ಸಂಸ್ಕೃತಿ ಹಾಗೂ ಅಸಮರ್ಪಕ ನಾಯಕತ್ವದಿಂದ ಇಸ್ರೋದ ಚಂದ್ರಯಾನ ವಿಫಲವಾಗಿದೆ ಎಂದು ಶಿವನ್ ಹೆಸರೆತ್ತದೆ ಮಿಶ್ರಾ ಫೇಸ್‌ಬುಕ್ ‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಿವನ್ ಇಸ್ರೋದ ಅಧ್ಯಕ್ಷ ಹುದ್ದೆ ಸ್ವೀಕರಿಸಿದ ತಕ್ಷಣ ಸ್ಪೇಸ್ ಅಪ್ಲಿಕೇಶನ್ ಸೆಂಟರ್‌ನ ಮುಖ್ಯಸ್ಥ ಹುದ್ದೆಯಿಂದ ಮಿಶ್ರಾರನ್ನು ಕೆಳಗಿಳಿಸಿ ಅವರನ್ನು ಇಸ್ರೋ ಅಧ್ಯಕ್ಷರ ಸಲಹೆಗಾರರ ಹುದ್ದೆಗೆ ನೇಮಿಸಿದ್ದರು. ಭಾರತದ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವನ್ನು ಖಾಸಗೀಕರಣಗೊಳಿಸುವ ಪ್ರಸ್ತಾವವನ್ನು ಮಿಶ್ರಾ ವಿರೋಧಿಸಿದ್ದು ಈ ಬದಲಾವಣೆಗೆ ಕಾರಣ ಎನ್ನಲಾಗಿತ್ತು.

ನಾಯಕತ್ವ ಯಾವುದೇ ಸಂಸ್ಥೆಯ ಬೆನ್ನೆಲುಬಾಗಿದೆ. ಯಶಸ್ವೀ ಸಂಸ್ಥೆಗಳ ಸಾಮಾನ್ಯ ಲಕ್ಷಣವೆಂದರೆ ಇವು ಹೊಸ ಮಾರ್ಗವನ್ನು ಹುಡುಕಿ ಹೊಸತನ ತರಬಲ್ಲ ನಾಯಕನ್ನು ಆಯ್ಕೆ ಮಾಡಿವೆ. ನಾಯಕರು ಇತರರನ್ನು ಹುರಿದುಂಬಿಸುತ್ತಾರೆ, ಅಂಕೆಯಲ್ಲಿಟ್ಟುಕೊಳ್ಳುವುದಿಲ್ಲ. ನಾವೀನ್ಯತೆಯ ತುಡಿತವಿಲ್ಲದ ಸಂಸ್ಥೆಗಳು ಸಮಯದೊಂದಿಗೆ ಮುಂದೆ ಸಾಗುವುದಿಲ್ಲ. ಅಂತಿಮವಾಗಿ ಜೀವಂತ ಪಳೆಯುಳಿಕೆಗಳಾಗಿ ಇತಿಹಾಸದಲ್ಲಿ ಸೇರುತ್ತವೆ ಎಂದು ಮಿಶ್ರಾ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಸ್ರೋದಲ್ಲಿರುವ ಸಾಂಸ್ಕೃತಿಕ ಮೌಲ್ಯ ವ್ಯವಸ್ಥೆಯು ಅಲ್ಲಿನ ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳನ್ನು ಟೀಕಿಸುವುದಕ್ಕೆ ಬಹುಷಃ ಅವಕಾಶ ನೀಡುವುದಿಲ್ಲ ಎಂದಿರುವ ಮಿಶ್ರಾ ಅಲ್ಲಿರುವ ಯೆಸ್ ಬಾಸ್ ಸಂಸ್ಕೃತಿಯನ್ನು ಟೀಕಿಸಿದ್ದಾರೆ. ವೈಫಲ್ಯಕ್ಕೆ ಕಾರಣ ಹುಡುಕುವ ಬದಲು ಪ್ರಾಯೋಗಿಕ ಪರೀಕ್ಷೆಗೆ ಹೆಚ್ಚಿನ ಸಿದ್ಧತೆ ನಡೆಸಬೇಕಿತ್ತು. ಎಲ್ಲಾ ಹಾಳಾದ ಮೇಲೆ ಕಣ್ಣೀರು ಸುರಿಸಿ ಏನು ಪ್ರಯೋಜನ ಎಂದವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News