ಮಧ್ಯಪ್ರದೇಶ ಸರಕಾರ ಉರುಳಿಸಲು ಬಿಜೆಪಿಯಿಂದ ‘ಹನಿಟ್ರ್ಯಾಪ್’: ಆರೋಪ

Update: 2019-09-22 17:42 GMT

ಭೋಪಾಲ, ಸೆ.22: ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿರುವ ಹನಿಟ್ರ್ಯಾಪ್ ಪ್ರಕರಣದಲ್ಲಿ ವಿಪಕ್ಷ ಬಿಜೆಪಿಯ ಕೈವಾಡವಿದೆ ಎಂದು ಕಾನೂನು ಸಚಿವ ಪಿಸಿ ಶರ್ಮ ಆರೋಪಿಸಿದ್ದಾರೆ.

ಅಧಿಕಾರ ಕೈತಪ್ಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹತಾಶೆಯಲ್ಲಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಕುತಂತ್ರದ ಮುಂದುವರಿದ ಭಾಗ ಇದಾಗಿದೆ. ಆದರೆ ಕಮಲನಾಥ್ ಸರಕಾರದ ನೇತೃತ್ವ ವಹಿಸುತ್ತಿರುವುದರಿಂದ ಬಿಜೆಪಿಯ ಯಾವುದೇ ಕುತಂತ್ರ ಫಲಿಸದು ಎಂದು ಶರ್ಮ ಹೇಳಿದ್ದಾರೆ.

 ಕಾಂಗ್ರೆಸ್ ಆರೋಪವನ್ನು ನಿರಾಕರಿಸಿರುವ ಬಿಜೆಪಿ ಮುಖಂಡ ಗೋಪಾಲ ಭಾರ್ಗವ, ಕೇವಲ ‘ಹನಿಟ್ರ್ಯಾಪ್’ ನಡೆಸಿ ಒಂದು ಸರಕಾರವನ್ನು ಬೀಳಿಸಲು ಸಾಧ್ಯವೇ. ಸಾಧ್ಯವಿದೆ ಎಂದಾದರೆ ಅದು ಸರಕಾರದ ಅಸ್ಥಿರತೆಯನ್ನು ತೋರಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

   ಮಧ್ಯಪ್ರದೇಶದಲ್ಲಿ ಉನ್ನತ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ‘ಹನಿಟ್ರ್ಯಾಪ್’ ಜಾಲ ಬುಧವಾರ ಬಯಲಿಗೆ ಬಂದಿತ್ತು. ಈ ಜಾಲವನ್ನು 48 ವರ್ಷದ ಶ್ವೇತಾ ಜೈನ್ ಎಂಬ ಮಹಿಳೆ ನಿರ್ವಹಿಸುತ್ತಿದ್ದಳು ಎನ್ನಲಾಗಿದ್ದು ಇದಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಮಾಹಿತಿ ತಂತ್ರಜ್ಞಾನ ವಿಭಾಗದ ಮಾಜಿ ಅಧಿಕಾರಿಯ ಪತ್ನಿಯ ಸಹಿತ ಐವರು ಮಹಿಳೆಯರನ್ನು ಬುಧವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ಶ್ವೇತಾ ಜೈನ್ ಭೋಪಾಲ್‌ನಲ್ಲಿ ಫ್ಯಾಕ್ಟರಿಯನ್ನೂ ಹೊಂದಿದ್ದಾಳೆ.

ಬಂಧಿತ ಮಹಿಳೆಯರಲ್ಲಿ ಒಬ್ಬಳು ಈ ಹಿಂದೆ ಬಿಜೆಪಿಯ ಯುವಮೋರ್ಛಾದೊಂದಿಗೆ ಸಂಪರ್ಕ ಹೊಂದಿದ್ದಳು. ಇವಳ ಪತಿ ಎಬಿವಿಪಿ ಸದಸ್ಯನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

 ಈ ಉನ್ನತ ಮಟ್ಟದ ಹನಿಟ್ರ್ಯಾಪ್ ಜಾಲದ ಬಾಹು ನೆರೆರಾಜ್ಯ ಮಹಾರಾಷ್ಟ್ರದವರೆಗೂ ವ್ಯಾಪಿಸಿದೆ ಎಂಬ ಮಾಹಿತಿಯಿರುವುದಾಗಿ ಪೊಲೀಸರು ಹೇಳಿದ್ದಾರೆ. ಯುವತಿಯರ ಆಮಿಷವೊಡ್ಡಿ ಪ್ರಭಾವೀ ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದ ತಂಡ ಬಳಿಕ ಅವರನ್ನು ಬಳಸಿಕೊಂಡು ತನ್ನ ಕೆಲಸ ಸಾಧಿಸುತ್ತಿತ್ತು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News