ತನ್ನ ದೀರ್ಘಾವಧಿ ಸಾಲ ಯೋಜನೆಗಳನ್ನು ಕೆಳದರ್ಜೆಗಿಳಿಸಿದ ಕೇರ್ ರೇಟಿಂಗ್ಸ್ ವಿರುದ್ಧ ರಿಲಯನ್ಸ್ ಕ್ಯಾಪಿಟಲ್ ಆಕ್ರೋಶ

Update: 2019-09-22 17:53 GMT

 ಹೊಸದಿಲ್ಲಿ,ಸೆ.22: ಕೇರ್ ರೇಟಿಂಗ್ಸ್ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕ್ಯಾಪಿಟಲ್ (ಆರ್‌ಸಿಎಲ್)ನ 15,000 ಕೋ.ರೂ.ಗಳ ದೀರ್ಘಾವಧಿ ಸಾಲ ಯೋಜನೆಯನ್ನು ಕೆಳದರ್ಜೆಗಿಳಿಸಿದೆ. ‘ಕೇರ್ ಡಿ’ಯಿಂದ ‘ಕೇರ್ ಪಿಪಿ-ಎಂಎಲ್‌ಡಿ ಡಿ’ದರ್ಜೆಗೆ ಇಳಿಸಿರುವ ಕೇರ್ ರೇಟಿಂಗ್ಸ್‌ನ ಶುಕ್ರವಾರದ ಕ್ರಮದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ರಿಲಯನ್ಸ್ ಕ್ಯಾಪಿಟಲ್ ಇದು ತಾರತಮ್ಯ,ಪೂರ್ವಗ್ರಹ ಮತ್ತು ಅನ್ಯಾಯದಿಂದ ಕೂಡಿದೆ ಎಂದು ಬಣ್ಣಿಸಿದೆ. ‘ಕೇರ್ ಪಿಪಿ-ಎಂಎಲ್‌ಡಿ ಡಿ’ನೀಡಲು ಸಾಧ್ಯವಿರುವ ಕನಿಷ್ಠ ದರ್ಜೆಯಲ್ಲೊಂದಾಗಿದೆ.

  ಕಂಪನಿಯ ಪರಿವರ್ತನೀಯವಲ್ಲದ ಸಾಲಪತ್ರ(ಎನ್‌ಸಿಡಿ)ಗಳ ಮೇಲಿನ ಬಡ್ಡಿ ಪಾವತಿಯಲ್ಲಿ ಇತ್ತೀಚಿನ ವಿಳಂಬವನ್ನು ದರ್ಜೆ ಪರಿಷ್ಕರಣೆಗೆ ಪರಿಗಣಿಸಲಾಗಿದೆ ಎಂದು ಕೇರ್ ರೇಟಿಂಗ್ಸ್ ತನ್ನ ವೌಲ್ಯಮಾಪನ ವರದಿಯಲ್ಲಿ ತಿಳಿಸಿದೆ. ಆದರೆ ಬಡ್ಡಿ ಪಾವತಿಯಲ್ಲಿ ಕೇವಲ ಒಂದು ದಿನದ ವಿಳಂಬವಾಗಿತ್ತು ಎಂದು ಕಂಪನಿಯು ತಿಳಿಸಿದೆ.

ಕೆಲವು ಎನ್‌ಸಿಡಿಗಳ ಮೇಲಿನ ಬಡ್ಡಿಯನ್ನು 2019,ಸೆ.9ರಂದು ಪಾವತಿಸಬೇಕಿತ್ತು. ಈ ಎನ್‌ಸಿಡಿಗಳ ಡಿಬೆಂಚರ್ ಟ್ರಸ್ಟಿ ಆರ್‌ಸಿಎಲ್ ಬಡ್ಡಿ ಪಾವತಿಯನ್ನು ಒಂದು ಕೆಲಸದ ದಿನದಷ್ಟು ವಿಳಂಬಿಸಿದೆ ಮತ್ತು 2019,ಸೆ.11ರಂದು ಅದನ್ನು ಪಾವತಿಸಿದೆ ಎಂದು ಅದೇ ದಿನ ಇ-ಮೇಲ್ ಮೂಲಕ ಕೇರ್‌ಗೆ ತಿಳಿಸಿದ್ದರು. ಕೇರ್‌ನ ಕೊರತೆ ಗುರುತಿಸುವಿಕೆ ನೀತಿಯಂತೆ ಇದು ಕಂಪನಿಯ ಹಣ ಪಾವತಿ ಸಾಮರ್ಥ್ಯದಲ್ಲಿಯ ಕೊರತೆಯಾಗಿದೆ ಮತ್ತು ದರ್ಜೆಯನ್ನು ಕೆಳಗಿಳಿಸುವಾಗ ಇದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಕೇರ್ ರೇಟಿಂಗ್ಸ್ ತಿಳಿಸಿದೆ.

ಶನಿವಾರ ಶೇರು ವಿನಿಮಯ ಕೆಂದ್ರಗಳಿಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಕೇರ್ ರೇಟಿಂಗ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆರ್‌ಸಿಎಲ್,ಬ್ಯಾಂಕ್ ಸರ್ವರ್‌ಗಳಲ್ಲಿಯ ತಾಂತ್ರಿಕ ದೋಷದಿಂದಾಗಿ ಬಡ್ಡಿ ಪಾವತಿಯಲ್ಲಿ ಒಂದು ದಿನದ ವಿಳಂಬವಾಗಿತ್ತು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News