ಗಲ್ಫ್‌ನಲ್ಲಿ ವಿದೇಶಿ ಪಡೆಗಳ ಉಪಸ್ಥಿತಿಯಿಂದ ಅಭದ್ರತೆ: ಇರಾನ್ ಅಧ್ಯಕ್ಷ ರೂಹಾನಿ

Update: 2019-09-22 17:59 GMT

 ಟೆಹರಾನ್,ಸೆ.22: ಗಲ್ಫ್ ಪ್ರದೇಶದಲ್ಲಿ ವಿದೇಶಿ ಪಡೆಗಳ ಉಪಸ್ಥಿತಿಯು ‘ಅಭದ್ರತೆ’ಯ ಭಾವನೆಯನ್ನು ಸೃಷ್ಟಿಸಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ. ಗಲ್ಫ್ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳ ನಿಯೋಜನೆಗೆ ಅಮೆರಿಕವು ಆದೇಶಿಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

 ‘‘ವಿದೇಶಿ ಪಡೆಗಳು ನಮ್ಮ ಜನರಿಗೆ ಹಾಗೂ ನಮ್ಮ ಪ್ರಾಂತಕ್ಕೆ ಸಮಸ್ಯೆಗಳನ್ನು ಹಾಗೂ ಅಭದ್ರತೆ’ಯನ್ನು ಸೃಷ್ಟಿಸಿವೆೆಯೆಂದು ರೂಹಾನಿ ಆಪಾದಿಸಿದ್ದಾರೆ. ವಾರ್ಷಿಕ ಸೇನಾ ಪರೇಡ್‌ನಲ್ಲಿ ಮಾತನಾಡಿದ ಅವರು ಗಲ್ಫ್ ಪ್ರಾಂತದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಾದೇಶಿಕ ಸಹಕಾರ ಯೋಜನೆಯೊಂದನ್ನು ಇರಾನ್ ವಿಶ್ವಸಂಸ್ಥೆಯಲ್ಲಿ ಮಂಡಿಸಲಿದೆಯೆಂದು ಅವರು ತಿಳಿಸಿದ್ದಾರೆ.

ಶಂಕಿತ ಹೌದಿ ಬಂಡುಕೋರರು ಸೆಪ್ಟೆಂಬರ್ 14ರಂದು ಸೌದಿಯ ತೈಲ ಸಂಸ್ಕರಣಾ ಸ್ಥಾವರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಳಿಕ ಇರಾನ್ ಹಾಗೂ ಅಮೆರಿಕ ನಡುವಣ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿದೆ. ಈ ದಾಳಿಗಳ ಹಿಂದೆ ಇರಾನ್‌ನ ಕೈವಾಡವಿರುವುದಾಗಿ ಸೌದಿ ಆರೇಬಿಯ ಹಾಗೂ ಆಮೆರಿಕ ಆಪಾದಿಸಿವೆ.

  ಸೌದಿ ಸಾಮ್ರಾಜ್ಯದ ಮನವಿಯ ಮೇರೆಗೆ ತಾನು ಹೆಚ್ಚುವರಿ ಸೇನಾಪಡೆಗಳನ್ನು ಗಲ್ಫ್ ಪ್ರಾಂತಕ್ಕೆ ಕಳುಹಿಸಿಕೊಡುವುದಾಗಿ ಅಮೆರಿಕವು ಶುಕ್ರವಾರ ಘೋಷಿಸಿತ್ತು.

 ಆದರೆ ಇದನ್ನು ಬಲವಾಗಿ ವಿರೋಧಿಸಿರುವ ರೂಹಾನಿ ವಿದೇಶಿ ಶಕ್ತಿಗಳು ಗಲ್ಫ್ ಪ್ರದೇಶದಿಂದ ದೂರವಿರಬೇಕೆಂದು ಆಗ್ರಹಿಸಿದ್ದಾರೆ. ‘‘ವಿದೇಶಿ ಶಕ್ತಿಗಳು ನಿಜಕ್ಕೂ ಅವು ನಮ್ಮ ಪ್ರಾಂತವನ್ನು ಶಸ್ತ್ರಾಸ್ತ್ರ ಸ್ಪರ್ಧೆಯ ತಾಣವಾಗಿ ಮಾರ್ಪಡಿಸಕೊಡದು’’ ಎಂದವರು ಹೇಳಿದ್ದಾರೆ.

 ನಿಮ್ಮ ಉಪಸ್ಥಿತಿಯು ಪ್ರದೇಶಕ್ಕೆ ನೋವು ಹಾಗೂ ಸಂಕಷ್ಟವನ್ನು ತಂದುಕೊಟ್ಟಿದೆ. ನೀವು ನಮ್ಮ ಪ್ರಾಂತ ಹಾಗೂ ದೇಶಗಳಿಂದ ಎಷ್ಟು ದೂರವಿರುತ್ತೀರೋ, ನಮ್ಮ ಪ್ರಾಂತದ ಭದ್ರತೆ ಅಷ್ಟು ಹೆಚ್ಚಾಗುತ್ತದೆ’’ ಎಂದು ಅಮೆರಿಕ ನೇತೃತ್ವದ ವಿದೇಶಿ ಪಡೆಗಳನ್ನು ಉದ್ದೇಶಿಸಿ ಹೇಳಿದ್ದಾರೆ. ಈ ಸೂಕ್ಷ್ಮ ಹಾಗೂ ಮಹತ್ವದ ಐತಿಹಾಸಿಕ ಕ್ಷಣದಲ್ಲಿ ನಮ್ಮ ನೆರೆಹೊರೆಯ ರಾಷ್ಟ್ರಗಳಿಗೆ ಶಾಂತಿ ಹಾಗೂ ಭ್ರಾತೃತ್ವದ ಕೊಡುಗೆಯನ್ನು ವಿಸ್ತರಿಸುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News