ಪೊಲೀಸರಿಂದ 13 ಮಂದಿಯ ಅರೆಬೆತ್ತಲೆ ಮೆರವಣಿಗೆ

Update: 2019-09-23 08:29 GMT

ಅಲ್ವರ್/ ಜೈಪುರ, ಸೆ.23: ಹರ್ಯಾಣದ ರೌಡಿಯೊಬ್ಬನಿಗೆ ಬೆರ್ಹ್ರಾರ್ ಪೊಲೀಸ್ ಲಾಕಪ್‌ನಿಂದ ತಪ್ಪಿಸಿಕೊಳ್ಳಲು ನೆರವಾದ ಆರೋಪದಲ್ಲಿ 13 ಮಂದಿಗೆ ಕೈಕೋಳ ತೊಡಿಸಿ ಅರೆಬೆತ್ತಲೆಯಾಗಿ ಸಾರ್ವಜನಿಕವಾಗಿ ನಡೆಸಿಕೊಂಡು ಹೋದ ಪ್ರಕರಣ ರವಿವಾರ ನಡೆದಿದೆ. ಆದರೆ ರಾಜಸ್ಥಾನ ಪೊಲೀಸರು ಇದನ್ನು "ಮೋಕಾ ಮುವಾಯಾನ" (ಸ್ಥಳದಲ್ಲೇ ಪರಿಶೀಲನೆ) ಎಂದು ಸಮರ್ಥಿಸಿಕೊಂಡಿದ್ದಾರೆ.

ಕೇವಲ ಒಳ ಉಡುಪಿನಲ್ಲಿದ್ದ ಹದಿಮೂರು ಮಂದಿಯನ್ನು ಹೆಲ್ಮೆಟ್ ಧರಿಸಿದ್ದ ಸಶಸ್ತ್ರ ಪೊಲೀಸರು ನಡೆಸಿಕೊಂಡು ಹೋಗುತ್ತಿರುವ ಹಾಗೂ ಸಾರ್ವಜನಿಕರು ಗುಂಪು ಸೇರಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಡಿಯೊ ಚಿತ್ರೀಕರಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಇದರೊಂದಿಗೆ ಸೆಪ್ಟಂಬರ್ 6ರಂದು ಬೆರ್ಹ್ರಾರ್ ಠಾಣೆಯಿಂದ ಕುಖ್ಯಾತ ರೌಡಿ ವಿಕ್ರಮ್ ಸಿಂಗ್ ಅಲಿಯಾಸ್ ಪಪ್ಲಾ ತಪ್ಪಿಸಿಕೊಂಡ ಪ್ರಕರಣದ ತನಿಖೆ ವಿಚಿತ್ರ ತಿರುವು ಪಡೆದುಕೊಂಡಿದೆ.

"ಅಪರಾಧ ತನಿಖೆಯಲ್ಲಿ ಸಾಮಾನ್ಯವಾದ ಘಟನೆಯ ಚಿತ್ರಣದ ಮರುಸೃಷ್ಟಿ ಸಲುವಾಗಿ ಆರೋಪಿಗಳನ್ನು ಕರೆದೊಯ್ದಿದ್ದೇವೆ. ಜನರಿಗೆ ಯಾವುದೇ ರೀತಿಯ ಸಂದೇಶ ರವಾನಿಸುವುದು ನಮ್ಮ ಉದ್ದೇಶವಾಗಿರಲಿಲ್ಲ" ಎಂದು ಭಿವಂಡಿ ಎಸ್ಪಿ ಅಮನ್‌ದೀಪ್ ಸಿಂಗ್ ಕಪೂರ್ ಹೇಳಿದ್ದಾರೆ. ಕಮಾಂಡೊ ಘಟಕ ಸೇರಿದಂತೆ ಸುಮಾರು 150 ಪೊಲೀಸರು 13 ಮಂದಿ ಆರೋಪಿಗಳನ್ನು ಎರಡು ಕಿಲೋಮೀಟರ್ ದೂರ ಬರಿಗಾಲಲ್ಲಿ ನಡೆಸಿಕೊಂಡು ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News