"ಉಳ್ಳಾಲದಲ್ಲಿ ಶೂಟೌಟ್ ಗೆ ಕಾರಣವಾಗಿದ್ದು ವಾಟ್ಸ್‌ಆ್ಯಪ್ ಸ್ಟೇಟಸ್"

Update: 2019-09-23 07:20 GMT

ಮಂಗಳೂರು, ಸೆ.23: ಉಳ್ಳಾಲದ ಮುಕ್ಕಚ್ಚೇರಿ ಬಳಿ ರವಿವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಸಂಭವಿಸಿದ ಗುಂಡು ಹಾರಾಟ ಹಾಗೂ ದೊಂಬಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸುಹೈಲ್ ಕಂದಕ್ ರಾಜಕೀಯ ಪಕ್ಷದ ಯುವ ಘಟಕದ ಸಕ್ರಿಯ ಕಾರ್ಯಕರ್ತನಾಗಿದ್ದು, ಕಚೇರಿಯಲ್ಲಿನ ಅರ್ಶದ್ ಎಂಬಾತ ತನ್ನ ವಾಟ್ಸ್‌ಆ್ಯಪ್‌ನಲ್ಲಿ ಸುಹೈಲ್ ಕಂದಕ್ ಪರ ಸ್ಟೇಟಸ್ ಹಾಕಿದ್ದ. ಅದೇ ಪಕ್ಷದ ಸಲ್ಮಾನ್ ಎಂಬಾತ ಅರ್ಶದ್‌ಗೆ ಕರೆ ಮಾಡಿ ನಾವೂ ಪಕ್ಷದಲ್ಲಿ ಕೆಲಸ ಮಾಡುವುದಿಲ್ಲವೇ, ಆತನಿಗೆ ಮಾತ್ರ ಯಾಕೆ ಪ್ರಚಾರ ಕೊಡುವುದೆಂದು ಪ್ರಶ್ನಿಸಿದ ಕ್ಷುಲ್ಲಕ ವಿಚಾರದಲ್ಲಿ ಈ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಉಳಿದ ಆಯಾಮದಲ್ಲೂ ವಿಚಾರಣೆ ನಡೆಸಲಾಗುತ್ತಿದೆ. ಜತೆಗೆ ಪ್ರಕರಣದ ಆರೋಪಿಗಳ ಪೂರ್ವಾಪರಗಳ ಬಗ್ಗೆಯೂ ತಿಳಿಯಲಾಗುತ್ತಿದೆ. ಆರೋಪಿಗಳಲ್ಲಿ ಕೆಲವರು ಬೇರೆ ಬೇರೆ ಹೆಸರುಗಳನ್ನು ಹೊಂದಿರುವುದು ತಿಳಿದುಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಹೈಲ್ ಕಂದಕ್, ಬಶೀರ್ ಮತ್ತು ಇತರರ ಆರು ಮಂದಿಯ ಗುಂಪು ಮುಕ್ಕಚ್ಚೇರಿಗೆ ರವಿವಾರ ತಡರಾತ್ರಿ 11:45ರ ಸುಮಾರಿಗೆ ತೆರಳಿ ಸಲ್ಮಾನ್ ಎಂಬಾತನ್ನು ವಿಚಾರಿದ್ದಾರೆ. ಅಲ್ಲೇ ಇದ್ದ ಇನ್ನೊಂದು ತಂಡದ ಜತೆ ಮಾತುಕತೆ ನಡೆದು ಅದು ಅತಿರೇಕಕ್ಕೆ ತಿರುಗಿ ಸುಹೈಲ್ ಕಂದಕ್ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಆ ಗುಂಡು ಇರ್ಶಾದ್ ಎಂಬಾತನ ಬಲಕಾಲಿನ ಮಂಡಿ ಚಿಪ್ಪಿನ ಕೆಳಗೆ ಪ್ರವೇಶಿಸಿದೆ. ಈ ಸಂದರ್ಭ ಇನ್ನೊಂದು ಗುಂಪು ಹಲ್ಲೆ ನಡೆಸಿದೆ. ಇದೇ ಸಂದರ್ಭ ಕಾರೊಂದನ್ನು ವಾಹನ ಹಾನಿಗೈಯಲಾಗಿದೆ. ಪ್ರಕರಣದಲ್ಲಿ ಸುಹೈಲ್ ಕಂದಕ್ ಮೇಲೆ ಹಲ್ಲೆಯಾಗಿದ್ದು, ಆತ ನೇತಾಜಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆಗೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಗುಂಡು ಹಾರಾಟಕ್ಕೆ ಸಂಬಂಧಿಸಿ 6 ಮಂದಿ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿದೆ. ಮೂರು ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಘಟನೆಯ ಸಂದರ್ಭ ಆರು ಗುಂಡುಗಳನ್ನು ಬಳಸಿರುವುದಾಗಿ ಸುಹೈಲ್ ಕಂದಕ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ 2 ಸಜೀವ ಹಾಗೂ 1 ಬಳಸಲ್ಪಟ್ಟ ಗುಂಡು ದೊರಕಿದೆ. ಈ ಬಗ್ಗೆ ಎಫ್‌ಎಸ್‌ಎಲ್ ತಂಡ ಸಮಗ್ರ ತನಿಖೆಯನ್ನು ನಡೆಸುತ್ತಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.

ಘಟನೆ ತಡರಾತ್ರಿ ನಡೆದಿದ್ದು, ಸೂಕ್ಷ್ಮ ವಿಚಾರವಾಗಿರುವುದರಿಂದ ತಕ್ಷಣ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅವರನ್ನು ಅಭಿನಂದಿಸುತ್ತಿರುವುದಾಗಿ ತಿಳಿಸಿದ ಆಯುಕ್ತ ಡಾ. ಹರ್ಷ, ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಲಕ್ಷ್ಮೀ ಗಣೇಶ್ ಹಾಗೂ ಅರುಣಾಂಶುಗಿರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News