ಎಂ.ಸಿ.ಸಿ. ಬ್ಯಾಂಕಿನ ವಾರ್ಷಿಕ ಮಹಾಸಭೆ, ಶೇ.10 ಡಿವಿಡೆಂಡ್ ಘೋಷಣೆ

Update: 2019-09-23 09:27 GMT

ಮಂಗಳೂರು, ಸೆ.23: ಮಂಗಳೂರು ಕೆಥೊಲಿಕ್ ಕೋ-ಆಪರೇಟಿವ್ ಬ್ಯಾಂಕ್ (ಎಂ.ಸಿ.ಸಿ. ಬ್ಯಾಂಕ್) ಇದರ 101ನೇ ವಾರ್ಷಿಕ ಮಹಾಸಭೆಯು ಸೆ.22ರಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅಧ್ಯಕ್ಷತೆಯಲ್ಲಿ ನಗರದ ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜಿನ ಲೊಯೊಲಾ ಹಾಲ್‌ನಲಿ ಇಲ್ಲಿ ಜರುಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅನಿಲ್ ಲೋಬೊ, ‘ಬ್ಯಾಂಕ್ 2018-19ನೇ ಸಾಲಿನಲ್ಲಿ333.17 ಕೋಟಿ ರೂ. ಠೇವಣಿ, 33.55 ಕೋಟಿ ರೂ. ನಿಧಿಗಳನ್ನು ಹೊಂದಿದ್ದು, 215.46 ಕೋಟಿ ರೂ. ಸಾಲವನ್ನು ನೀಡಲಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು 391.76 ಕೋಟಿ ರೂ. ಇದ್ದು 14.29 ಕೋಟಿ ರೂ. ಪಾಲು ಬಂಡವಾಳ ಹೊಂದಿರುತ್ತದೆ. ಬ್ಯಾಂಕ್ 5.21 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ಘೊಷಿಸಲಾಗಿದೆ’ ಎಂದರು. ಸತತ ಎಂಟು ವರ್ಷಗಳಿಂದ ಬ್ಯಾಂಕಿನ ಆಡಿಟ್ ವರ್ಗೀಕರಣವು ‘ಎ’ ಆಗಿದ್ದು, ಬ್ಯಾಂಕು ಸದೃಢವಾಗಿದೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.

ಗ್ರಾಹಕರಿಗೆ ಬ್ಯಾಂಕಿನ ಹಂಪನಕಟ್ಟ ಶಾಖಾ ಕಚೇರಿಯಲ್ಲಿ ಎಟಿಎಂ ಯಂತ್ರವನ್ನು ಆಳವಡಿಸಲಾಗಿದ್ದು, ವರದಿ ವರ್ಷದಲ್ಲಿ ಕಂಕನಾಡಿ, ಬಿ.ಸಿ.ರೋಡ್ ಮತ್ತು ಬಜ್ಪೆ ಶಾಖೆಯಲ್ಲಿ ಸ್ವಂತ ಎಟಿಎಂ ಅಳವಡಿಸಲಾಗಿದೆ ಮತ್ತು ಗ್ರಾಹಕರಿಗೆ ಎಟಿಎಂ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ವರದಿ ವರ್ಷದಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಲಾಗಿದ್ದು, ಹಣವನ್ನು ಮೊಬೈಲ್ ಮುಖಾಂತರ ವರ್ಗಾಯಿಸಬಹುದಾಗಿದೆ. ಅಲ್ಲದೆ ಮೊಬೈಲ್, ಡಿಶ್ ರಿಚಾರ್ಚ್ ಮಾಡಬಹುದಾಗಿದೆ. ಬ್ಯಾಂಕಿನಲ್ಲಿ ಎನ್‌ಆರ್‌ಐ ಸೌಲಭ್ಯವಿದ್ದು, ಅನಿವಾಸಿ ಭಾರತೀಯರಿಗೆ ಬ್ಯಾಂಕಿನಲ್ಲಿ ಎನ್‌ಆರ್‌ಇ ಖಾತೆಯನ್ನು ತೆರೆದು ವ್ಯವಹರಿಸಲು ಹಾಗೂ ಬ್ಯಾಂಕ್ ನೀಡುತ್ತಿರುವ ಸೌಲಭ್ಯಗಳನ್ನು ಬಳಸಲು ಸಹಕಾರಿಯಾಗಿದೆ. ಅಲ್ಲದೆ ಎನ್‌ಆರ್‌ಇ ಗ್ರಾಹಕರಿಗಾಗಿ ಹಂಪನಕಟ್ಟ ಶಾಖೆಯಲ್ಲಿ ಪ್ರತ್ಯೇಕ ಎನ್‌ಆರ್‌ಐ ಸೆಲ್ ಸ್ಥಾಪಿಸಲಾಗಿದೆ. ಸದಸ್ಯರಿಗೆ, ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಇ- ಸ್ಟ್ಯಾಂಪಿಂಗ್ ವ್ಯವಸ್ಥೆಯಿದ್ದು, ವರದಿ ವರ್ಷದಲ್ಲಿ ಕಂಕನಾಡಿ, ಬಿ.ಸಿ.ರೋಡ್, ಬಜ್ಪೆ ಮತ್ತು ಉಡುಪಿ ಶಾಖೆಯಲ್ಲಿ ಇ- ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ. ಮುಂದಿನ ವರ್ಷದಲ್ಲಿ ಎಲ್ಲಾ ಶಾಖೆಗಳಲ್ಲಿ ಈ ವ್ಯವಸ್ಥೆಯನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

ಬ್ಯಾಂಕಿನ 2018-19ರ ಆರ್ಥಿಕ ಲೆಕ್ಕಪತ್ರಗಳನ್ನು, ಲೆಕ್ಕ ಪರಿಶೋಧಕರ ವರದಿ, 2019-20ನೇ ಸಾಲಿನ ವಾರ್ಷಿಕ ಬಜೆಟ್, 2019-20ನೇ ವರ್ಷದ ಕಾರ್ಯಯೋಜನೆ, ಉಪವಿಧಿಗಳಿಗೆ ತಿದ್ದುಪಡಿಯನ್ನು ಮಹಾಸಭೆಯಲ್ಲಿ ಮಂಡಿಸಿ ಸರ್ವಾನುಮತದಿಂದ ಒಪ್ಪಿಕೊಂಡು ಮಂಜೂರು ಮಾಡಲಾಯಿತು.

ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ ಮಹಾಸಭೆಯ ನಡವಳಿಕೆಗಳನ್ನು ವಾಚಿಸಿದರು. ನಿರ್ದೇಶಕರಾದ ಡೊಲ್ಫಿ ಪತ್ರಾವೊ, ಡೆವಿಡ್ ಡಿಸೋಜ, ಆಂಡ್ರು ಡಿಸೋಜ, ಮಾರ್ಸೆಲ್ ಡಿಸೋಜ, ಎಲ್‌ರೊಯ್ ಕಿರಣ್ ಕ್ರಾಸ್ತೊ, ಜೆ.ಪಿ.ರೊಡ್ರಿಗಸ್, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಸಿ.ಜಿ.ಪಿಂಟೊ, ಮೈಕಲ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಾಪ್ರಬಂಧಕ ಸುನಿಲ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News