ಕಾರ್ಪೊರೇಟ್ ತೆರಿಗೆ ಕಡಿತದಿಂದ ಚೈತನ್ಯ ದೊರಕದು: ಡಾ. ನಾಗರಾಜ್

Update: 2019-09-23 12:58 GMT

ಮಂಗಳೂರು: ಸೆ. 23: ಪ್ರಸಕ್ತ ದೇಶದಲ್ಲಿ ಆರ್ಥಿಕ ಹಿಂಜರಿತ ಬಹುಮಟ್ಟದಲ್ಲಿ ಕಾಡುತ್ತಿದ್ದು, ಇದಕ್ಕಾಗಿ ಸರಕಾರವು ಕಾರ್ಪೊರೇಟ್ ತೆರಿಗೆ ಕಡಿತ ಮಾರ್ಗ ಅನುಸರಿಸಿದರೂ ಅದು ಚೈತನ್ಯ ನೀಡಲು ಸಾಧ್ಯವಾಗದು ಎಂದು ಮುಂಬಯಿಯ ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಡೆವೆಲಪ್‌ಮೆಂಟ್ ರಿಸರ್ಚ್‌ನ ಪ್ರೊಫೆಸರ್ ಡಾ.ನಾಗರಾಜ್ ರಾಯಪ್ರೊಲು ಅಭಿಪ್ರಾಯಿಸಿದ್ದಾರೆ.

ನಗರದ ಸಂತ ಅಲೋಶಿಯಸ್ ಕಾಲೇಜಿನ ಆಶ್ರಯದಲ್ಲಿ ಅರ್ಥಶಾಸ ವಿಭಾಗದ ವತಿಯಿಂದ ‘ಆರ್ಥಿಕ ಹಿಂಜರಿತ’ ಎಂಬ ವಿಚಾರದಲ್ಲಿ ಸೋಮವಾರ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಒಟ್ಟು ಬೇಡಿಕೆಯ ಮಟ್ಟ ಕುಸಿತವಾಗುತ್ತಿದ್ದು, ಹೊಸ ಹೂಡಿಕೆಗೆ ನಿರಾಸಕ್ತಿ ಬೆಳೆಯುತ್ತಿದೆ. ಯಾವುದೇ ವಸ್ತು ಅಥವಾ ಖರೀದಿ ಮೇಲೆ ಜನರಿಗೆ ಬೇಡಿಕೆ ಕುಸಿತ ಆಗುತ್ತಾ ಸಾಗಿದಾಗ ಆರ್ಥಿಕ ವ್ಯತ್ಯಾಸಗಳು ಕಾಣಲು ಶುರುವಾಗುತ್ತದೆ. ಸದ್ಯ ದೇಶದಲ್ಲಿ ಅಂತಹ ಪರಿಸ್ಥಿತಿ ಇದೆ ಎಂದು ವಿಶ್ಲೇಷಿಸಿದರು.
ಬೇಡಿಕೆಯೇ ಕುಸಿಯುತ್ತಿರುವುದರಿಂದ ಕಾರ್ಪೊರೇಟ್ ತೆರಿಗೆಯನ್ನು ಕಡಿತ ಮಾಡಿದರೆ ಆ ಮೂಲಕ ಹೊಸ ಉದ್ಯಮ, ಬಂಡವಾಳ ಹೂಡಿಕೆ ಆಗಲಿದೆ ಎಂಬುದಕ್ಕೆ ಖಾತ್ರಿ ಏನು ಎಂದವರು ಪ್ರಶ್ನಿಸಿದರು.

ನಿರುದ್ಯೋಗ ಸಮಸ್ಯೆ ದೇಶದಲ್ಲಿ ಬಹುವಾಗಿ ಕಾಡುತ್ತಿದೆ. ಗ್ರಾಮಾಂತರ ಭಾಗದಲ್ಲಿ 2011-12ರಲ್ಲಿ ನಿರುದ್ಯೋಗ ಪ್ರಮಾಣದ ಸೂಚ್ಯಂಕ 1.7 ಇದ್ದರೆ ಈಗ ಅದು 5.7ರ ಗಡಿ ತಲುಪಿದೆ. ನಗರ ಭಾಗದಲ್ಲಿ 3ರಷ್ಟಿದ್ದ ಈ ಪ್ರಮಾಣ ಈಗ 6.9ಕ್ಕೆ ತಲುಪಿದೆ. 15 ವಯಸ್ಸಿಗಿಂತ 29ರ ಹರೆಯದಲ್ಲಿ ಕೆಲಸ ಮಾಡುತ್ತಿರುವ ಪ್ರಮಾಣ 2004ರಲ್ಲಿ ಶೇ.56ರಷ್ಟಿದ್ದರೆ, 2017ರಲ್ಲಿ ಅದು ಶೇ.38ಕ್ಕೆ ಕುಸಿದಿದೆ. 30 ವರ್ಷ ಮೇಲ್ಪಟ್ಟವರು ಹಿಂದೆ ಶೇ.68 ಇದ್ದರೆ ಈಗ ಶೇ.56ಕ್ಕೆ ಕುಸಿತ ಕಂಡಿದೆ ಎಂದರು.

ಜಾಗತಿಕ ಆರ್ಥಿಕ ಪರಿಸ್ಥಿತಿ, ಉದ್ಯಮಿಗಳ ಬ್ಯಾಂಕ್ ಸಾಲ ಬಾಕಿ, ಹೂಡಿಕೆ ಕೊರತೆ, ರ್ತು ಕುಸಿತ, ಅಪನಗದೀಕರಣ, ಜಿಎಸ್‌ಟಿ ಸೇರಿದಂತೆ ಬೇರೆ ಬೇರೆ ಕಾರಣಗಳು ಹಾಗೂ ಪ್ರತ್ಯಕ್ಷ-ಪರೋಕ್ಷ ಆರ್ಥಿಕ ನೀತಿಯಿಂದಾಗಿ ಜಿಡಿಪಿಯಲ್ಲಿ ಭಾರೀ ಕುಸಿತ ಕಾಣುವಂತಾಗಿದೆ ಎಂದರು.

ಸಂತ ಅಲೋಶಿಯಸ್ ಕಾಲೇಜಿನ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ ವಿಭಾಗ ಮುಖ್ಯಸ್ಥ ಡಾ.ನಾರ್ಬರ್ಟ್ ಲೋಬೋ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News