​ಪೆನ್ಸಿಲ್ ಕಲರಿಂಗ್ ಉದ್ಯಮದ ಹೆಸರಿನಲ್ಲಿ ವಂಚನೆ ವಿರುದ್ಧ ಪ್ರತಿಭಟನೆ

Update: 2019-09-23 12:19 GMT

ಮಂಗಳೂರು, ಸೆ.23: ಪೆನ್ಸಿಲ್ ತಯಾರಿಕಾ ಉದ್ಯಮದ ಹೆಸರಲ್ಲಿ ವಂಚನೆ ಮಾಡಿದವರನ್ನು ಬಂಧಿಸಿ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಸೋಮವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಮಾತನಾಡಿ ಪುತ್ತೂರಿನ ಕಬಕದಲ್ಲಿ ಆರಂಭಿಸಲಾಗಿದ್ದ ‘ಬದ್ರಿನಾಥ್ ಎಂಟರ್‌ಪ್ರೈಸಸ್’ ಎಂಬ ಕಂಪೆನಿಯು ಜಿಲ್ಲೆಯ ನೂರಾರು ಅಮಾಯಕ ನಿರುದ್ಯೋಗಿಗಳಿಂದ ಪೆನ್ಸಿಲ್ ಕಲರಿಂಗ್ ಮಾಡುವ ಸ್ವ ಉದ್ಯೋಗದಿಂದ ತಿಂಗಳಿಗೆ 20,000 ರೂ.ನಷ್ಟು ಆದಾಯ ಗಳಿಸಬಹುದು ಎಂದು ನಂಬಿಸಿ ಪ್ರತಿಯೊಬ್ಬರಿಂದ ತಲಾ 80,000 ರೂ.ವನ್ನು ಪಡೆದು ವಂಚಿಸಲಾಗಿದೆ.

ನಿರುದ್ಯೋಗಿಗಳನ್ನೇ ಗುರಿಯಾಗಿಸಿಕೊಂಡು ಮೋಸ ಮಾಡಲಾಗಿದೆ. ವಂಚಕ ಸಂಸ್ಥೆಯ ಮನುಚಂದ್ರ ಮತ್ತು ಆತನಿಗೆ ಸಹಕರಿಸಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಆರೋಪಿ ಮನುಚಂದ್ರ ಹಾಗೂ ಆತನ ಸಹಚರರ ಆಸ್ತಿ ಮುಟ್ಟುಗೋಲು ಹಾಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಿ ಅಮಾಯಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಡಿವೈಎಫ್‌ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಫೀಕ್ ಹರೇಕಳ ವಂದಿಸಿದರು.

ಅಶ್ರಫ್ ಅಝರ್ ಜೋಕಟ್ಟೆ, ಖಲೀಲ್ ಸುಳ್ಯ, ಇಬ್ರಾಹೀಂ, ನಝೀರ್ ಅಹ್ಮದ್ ಉಳ್ಳಾಲ, ಇಬ್ರಾಹೀಂ ಖಲೀಲ್, ಅಶ್ರಫ್ ಮಂಜೇಶ್ವರ, ಅಝೀಝ್ ಮಲ್ಲೂರು, ಅಬೂಬಕರ್ ಸಿದ್ದೀಕ್, ಯಹ್ಯಾ, ನಝೀರ್ ತೊಕ್ಕೊಟ್ಟು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News