ಬಳ್ಪ ಆದರ್ಶ ಗ್ರಾಮದಲ್ಲಿ ರಸ್ತೆಯ ದುಸ್ಥಿತಿಯಿಂದ ಮರದ ಕುರ್ಚಿಯಲ್ಲಿ ರೋಗಿಯ ಸಾಗಾಟ

Update: 2019-09-23 13:30 GMT

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆದರ್ಶ ಗ್ರಾಮ ಎಂದು ಕರೆದಿರುವ ಹಾಗೂ ರಾಜ್ಯದಲ್ಲಿ ನಂಬರ್ 1 ಆದರ್ಶ ಗ್ರಾಮವೆಂದು ಕರೆಯಿಸಿಕೊಂಡಿರುವ ಬಳ್ಪ ಗ್ರಾಮದ ಕತೆ ಇದು. ಇಲ್ಲಿನ ಪಡ್ಕಿಲ್ಲಾಯ ಎಂಬಲ್ಲಿ ರಸ್ತೆ ಸರಿ ಇಲ್ಲದ ಕಾರಣದಿಂದ 1 ಕಿಲೋ ಮೀಟರ್ ದೂರ ರೋಗಿಯನ್ನು ಚಯರ್ ನಲ್ಲಿ ಕರೆದುಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಸರಿಯಾದ ರಸ್ತೆ ಸಂಪರ್ಕವಿಲ್ಲ, ವಾಹನದ ಸೌಲಭ್ಯಗಳು ಇಲ್ಲದೆ ರೋಗಿಯನ್ನು ಮರದ ಕುರ್ಚಿಯಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ. ಈ ರಸ್ತೆ ಹಲವು ವರ್ಷಗಳಿಂದ ಸರಿ ಇಲ್ಲ. ಕಾಲು ದಾರಿಯಲ್ಲೇ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇಲ್ಲಿದೆ. ಪಡ್ಕಿಲ್ಲಾಡಯ ಎಂ ಪ್ರದೇಶದಲ್ಲಿ  ಸುಮಾರು 25 ರಿಂದ 50 ಮನೆಗಳು ಇವೆ. ಮಳೆಗಾಲದಲ್ಲಿ ಈ ಭಾಗಕ್ಕೆ ಸಂಪರ್ಕವೇ ಕಷ್ಟವಾಗಿದೆ. ಬೇಸಿಗೆಯಲ್ಲಿ ಸುತ್ತು ಬಳಸು ರಸ್ತೆ ಇದೆ. ಆದರೆ ಮಳೆಗಾಲ ರಸ್ತೆ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಸಂಚಾರ ಕಷ್ಟವಾಗುತ್ತದೆ. ಈಗ ರೋಗಿಗಳಿಗೆ ಸಂಕಷ್ಟ ಎದುರಾಗಿದೆ. 

ಸುಳ್ಯ ತಾಲೂಕಿನಲ್ಲಿ ಹಲವು ಕಡೆ ರಸ್ತೆಗಳು ಸರಿ ಇಲ್ಲ, ಬಳ್ಪ ಗ್ರಾಮವು ಆದರ್ಶ ಗ್ರಾಮವೆಂದು ಕಳೆದ 5 ವರ್ಷಗಳಿಂದ ವಿವಿಧ ಕೆಲಸ ಕಾರ್ಯಗಳು ನಡೆದವು. ಆದರ್ಶ ಗ್ರಾಮದ ನೆಪದಲ್ಲಿ ಬ್ಯಾಂಕ್, ಕೆಲವು ರಸ್ತೆ, ಮೊಬೈಲ್ ಟವರ್, ಬಸ್ಸು ತಂಗುದಾಣ, ಶಾಲೆಗಳಿಗೆ ಕೊಡುಗೆ, ಹೊಗೆಮುಕ್ತ ... ಹೀಗೇ ಹಲವು ಕಾರ್ಯಗಳು ಗಮನಸೆಳೆದವು. ಇಂದಿಗೂ ಬಿ ಎಸ್ ಎನ್ ಎಲ್ 3ಜಿ ಸೇವೆ ಬಳ್ಪದಲ್ಲಿ ಇಲ್ಲ. ಬೀಡಿಗುಡ್ಡೆಯಲ್ಲಿ ನಿರ್ಮಾಣವಾದ ಬಿ ಎಸ್ ಎನ್ ಎಲ್ ಟವರ್ ಆಗಾಗ ಕೈಕೊಡುತ್ತದೆ. ಈಗ ರಸ್ತೆ ಇಲ್ಲದ ಕಾರಣಕ್ಕೆ ರೋಗಿಯೊಬ್ಬರನ್ನು ಮರದ ಕುರ್ಚಿಯಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಬೇಕಾದ ಸ್ಥಿತಿ ಉಂಟಾಗಿದೆ.

ಅಸೌಖ್ಯಗೊಂಡ ರಾಮಣ್ಣ ಪೂಜಾರಿ ಎಂಬವರನ್ನು ರಸ್ತೆ ಸರಿ ಇಲ್ಲದ ಕಾರಣ ವಾಹನದವರೆಗೆ ಮರದ ಕುರ್ಚಿಯಲ್ಲಿ ಕರೆತರಲಾಯಿತು.

ಮಳೆಗಾಲ ಪಡ್ಕಿಲ್ಲಾಯ ಪ್ರದೇಶ ಸೇರಿದಂತೆ ಹಲವು ಕಡೆ ರಸ್ತೆ ಸಮಸ್ಯೆಯಿಂದ ಸಂಪರ್ಕ ಕಡಿತವಾಗುತ್ತದೆ. ಬೇಸಿಗೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಇರುವುದಿಲ್ಲ. ಹೀಗಾಗಿ ಸಮರ್ಪಕ ರಸ್ತೆ ಬೇಕು ಎನ್ನುವುದು ಗ್ರಾಮಸ್ತರ ಬೇಡಿಕೆಯಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News