ಡಿ.26ರಂದು ಸಂಭವಿಸಲಿದೆ ಅದ್ಭುತ, ರಮ್ಯ ಕಂಕಣ ಸೂರ್ಯಗ್ರಹಣ

Update: 2019-09-23 15:07 GMT
ಸಾಂದರ್ಭಿಕ ಚಿತ್ರ

ಉಡುಪಿ, ಸೆ.23: ಮುಂದಿನ ಡಿ.26ರಂದು ಪ್ರಕೃತಿಯ ವೈಚಿತ್ರಗಳಲ್ಲಿ ಒಂದಾಗ ಅಪರೂಪದ ಅದ್ಭುತ ಹಾಗೂ ರಮ್ಯವಾದ ಕಂಕಣ ಸೂರ್ಯಗ್ರಹಣ ಉಡುಪಿಯಿಂದ ಪ್ರಾರಂಭಗೊಂಡು ದಕ್ಷಿಣ ಭಾರತದ ಜನತೆಯ ವೀಕ್ಷಣೆಗೆ ಲಭ್ಯವಾಗಲಿದ್ದು, ಇದಕ್ಕಾಗಿ ಜಿಲ್ಲೆಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಖಗೋಳ ವಿಜ್ಞಾನ ಹಾಗೂ ಗ್ರಹಣಗಳ ಕುರಿತ ಕಾರ್ಯಾಗಾರವೊಂದು ನಾಳೆ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ. ತಿಳಿಸಿದ್ದಾರೆ.

ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ನೀಡಿದ ಅವರು, ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಹಾಗೂ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ (ಪಿಎಎಸಿ)ದ ಜಂಟಿ ಸಹಯೋಗದಲ್ಲಿ ಒಂದು ದಿನದ ಈ ಕಾರ್ಯಾಗಾರ ಬೆಳಗ್ಗೆ 9:30ರಿಂದ ನಡೆಯಲಿದೆ ಎಂದರು.

ಜಿಲ್ಲೆಯ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢ ಶಾಲೆಗಳ ತಲಾ ಒಬ್ಬೊಬ್ಬ ಶಿಕ್ಷಕರು ಇದರನ್ನು ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಇದಕ್ಕೆ ಸಹಕಾರವನ್ನು ನೀಡಲಿದೆ ಎಂದರು.

ಡಿ.26ರಂದು ನಡೆಯುವ ಕಂಕಣ ಸೂರ್ಯಗ್ರಹಣ ಹಾಗೂ ಅದನ್ನು ಸುರಕ್ಷಿತವಾಗಿ ಹೇಗೆ ವೀಕ್ಷಿಸಬಹುದು ಎಂಬುದನ್ನು ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುವುದು. ಹಾಗೂ ಪ್ರತಿ ಶಾಲೆಯಲ್ಲಿ ಸುರಕ್ಷಿತ ವೀಕ್ಷಣೆಗೆ ಬೇಕಾದ ಸರಳ ಉಪಕರಣವನ್ನು ಸಹ ನೀಡಲಾಗುವುದು ಎಂದು ಡಾ.ರಾಘವೇಂದ್ರ ತಿಳಿಸಿದರು.

ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಕಾಲೇಜಿನ ಭೌತಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರು ಹಾಗೂ ಪಿಎಎಸಿಯ ಸ್ಥಾಪಕ ಸಂಯೋಜಕರಾದ ಡಾ.ಎ.ಪಿ.ಭಟ್ ಮಾತನಾಡಿ, ಸೂರ್ಯಗ್ರಹಣವನ್ನು ಬರಿ ಕಣ್ಣಿನಿಂದ ನೋಡ ಬಾರದು. ಇದಕ್ಕಾಗಿ ಸಾಲಿಗ್ರಾಮದ ವೆಂಕಟರಮಣ ಉಪಾಧ್ಯಾಯರು ಅತ್ಯಂತ ಸರಳ ಹಾಗೂ ಸುರಕ್ಷಿತವಾದ ಪಿನ್‌ಹೋಲ್ ಉಪಕರಣವನ್ನು ತಯಾರಿಸಿ ಕೊಟ್ಟಿದ್ದಾರೆ. ಇದರ ಮೂಲಕ ಶಾಲೆಯೊಂದರ ಎಲ್ಲಾ ವಿದ್ಯಾರ್ಥಿಗಳು ಒಮ್ಮೆಗೆ ಸೂರ್ಯಗ್ರಹಣವನ್ನು ವೀಕ್ಷಿಸಬಹುದು. ಅಲ್ಲದೇ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವೂ ಇಂಥ ಸುರಕ್ಷಿತ ಉಪಕರಣವನ್ನು ತಯಾರಿಸಿ ವಿತರಿಸಲಿದೆ ಎಂದರು.

ಶಾಲಾ ಶಿಕ್ಷಕರ ಕಾರ್ಯಾಗಾರದ ಉದ್ಘಾಟನೆ ನಾಳೆ ಬೆಳಗ್ಗೆ 9:30ಕ್ಕೆ ಪಿಪಿಸಿಯ ಮಿನಿ ಹಾಲ್‌ನಲ್ಲಿ ನಡೆಯಲಿದೆ. ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಡಿಡಿಪಿಐ ಶೇಷಶಯನ ಕಾರಿಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ.ಆಚಾರ್ಯ, ಪಿಎಎಸಿಯ ಸಂಯೋಜಕ ಅತುಲ್ ಭಟ್, ವಿದ್ಯಾರ್ಥಿ ದಿನೇಶ್ ಹೆಬ್ಬಾರ್ ಉಪಸ್ಥಿತರಿದ್ದರು.

ಡಿ.26ರ ಕಂಕಣ ಸೂರ್ಯಗ್ರಹಣಕ್ಕೆ ಉಡುಪಿ ಕೇಂದ್ರ
ಡಿ.26ರ ಗುರುವಾರ ಸಂಭವಿಸುವ ಅಪರೂಪದ ಕಂಕಣ ಸೂರ್ಯಗ್ರಹಣದ ವೀಕ್ಷಣೆಗೆ ಉಡುಪಿ ಪ್ರಮುಖ ಕೇಂದ್ರವಾಗಿದೆ. ಬೆಳಗ್ಗೆ 8:04ಕ್ಕೆ ಗ್ರಹಣ ಪ್ರಾರಂಭಗೊಂಡು 9:24ಕ್ಕೆ ಖಗ್ರಾಸವಾದರೂ ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಮರೆಮಾಚಲಾಗದೇ ಕೆಲ ಕ್ಷಣ ಕಂಕಣ ಸೂರ್ಯದರ್ಶನ ಲಭ್ಯವಾಗಲಿದೆ. ಇದು ಸಂಭ್ರಮದ, ಅದ್ಭುತ ದೃಶ್ಯವೆನಿಸಲಿದೆ. ನಂತರ 11:03ಕ್ಕೆ ಗ್ರಹಣ ಮುಗಿಯಲಿದೆ ಎಂದು ಪೂರ್ಣಪ್ರಜ್ಞ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಡಾ.ಎ.ಪಿ.ಭಟ್ ತಿಳಿಸಿದರು.

ಉಡುಪಿಯಿಂದ ಉತ್ತರ ಭಾರತದವರೆಗೆ ಈ ಗ್ರಹಣ ಪಾರ್ಶ್ವಸೂಯ ಗ್ರಹಣವಾದರೆ, ಉಡುಪಿಯಿಂದ ದಕ್ಷಿಣ ಭಾರತದವರೆಗೆ ಕಂಕಣ ಸೂರ್ಯ ಗ್ರಹಣ. ಇದೊಂದು ಪ್ರಕೃತಿಯ ಸುಂದರ ವಿದ್ಯಮಾನ. ಗ್ರಹಣ ವೀಕ್ಷಣೆಗೆ ಸುವರ್ಣಾವಕಾಶ. ಮುಂದೆ ದಕ್ಷಿಣ ಭಾರತದವರಿಗೆ ಈ ಅವಕಾಶ ಸಿಗುವುದು 2064ಕ್ಕೆ ಮಾತ್ರ. ಹೀಗಾಗಿ ಅಂದು ಉಡುಪಿಗೆ ನಾಡಿನ ನಾನಾಕಡೆಗಳಿಂದ ಖಗೋಳಾಸಕ್ತರು, ಸಂಶೋಧಕರು ಗ್ರಹಣ ವೀಕ್ಷಣೆಗೆ ಆಗಮಿಸಲಿದ್ದಾರೆ ಎಂದರು.

ಸೂರ್ಯಗ್ರಹಣ ಎಂದರೆ....
ಸೂರ್ಯ, ಚಂದ್ರ ಮತ್ತು ಭೂಮಿ ಸರಳ ರೇಖೆಯಲ್ಲಿ ಬಂದಾಗ, ಸೂರ್ಯನ ಬೆಳಕನ್ನು ಚಂದ್ರ ತಡೆದು ಕತ್ತಲೆಯ ಅನುಭವವಾಗುತ್ತದೆ. ಚಂದ್ರನ ಪಥ ಭೂಮಿಯ ಸುತ್ತ ದೀರ್ಘ ವೃತ್ತಾಕಾರವಾಗಿರುವುದರಿಂದ ಗ್ರಹಣವಾಗುವಾಗ ಚಂದ್ರ ಭೂಮಿಯಿಂದ ದೂರದ ಎಪೊಜಿಯಲ್ಲಿದ್ದಲ್ಲಿ ಸೂರ್ಯನನ್ನು ಸಂಪೂರ್ಣ ಮರೆಮಾಚಲಾಗದೇ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ. ಅದೇ ಸಮೀಪದ ಪೆರಿಜಿಯಲ್ಲಿ ಚಂದ್ರನಿದ್ದರೆ ಸೂರ್ಯ ಕಾಣಿಸದೇ ಖಗ್ರಾಸ ಸೂರ್ಯಗ್ರಹಣ, ಡೈಮಂಡ್ ರಿಂಗ್‌ಗಳನ್ನು ಕಾಣಿಸುತ್ತವೆ ಎಂದು ಡಾ.ಭಟ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News