ಬೀಡಿ ಕಾರ್ಮಿಕರಿಗೆ ಪಿಎಫ್ ಇಲಾಖೆಯಿಂದ ಅನ್ಯಾಯ ಆರೋಪ: ಪ್ರತಿಭಟನೆ

Update: 2019-09-24 07:04 GMT

ಮಂಗಳೂರು, ಸೆ.24: ಬೀಡಿ ಕೈಗಾರಿಕೆಯಲ್ಲಿ ದುಡಿಯುವ ಕಾರ್ಮಿಕರಿಗೆ ಭವಿಷ್ಯ ನಿಧಿ (ಪಿಎಫ್) ಇಲಾಖೆಯಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಎಚ್‌ಎಂಎಸ್ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಯಿತು.

ನಗರದ ಫಳ್ನೀರ್‌ನ ಹೈಲ್ಯಾಂಡ್ ಆಸ್ಪತ್ರೆಯ ಸಮೀಪದ ಭವಿಷ್ಯನಿಧಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಕರ್ನಾಟಕ ಕರಾವಳಿ ಬೀಡಿ ಕಾರ್ಮಿಕರ ಸಂಘಟನೆಯ ಉಡುಪಿ, ದ.ಕ. ಜಿಲ್ಲಾ ಅಧ್ಯಕ್ಷ ಮುಹಮ್ಮದ್ ರಫಿ ಮಾತನಾಡಿ, ಭವಿಷ್ಯ ನಿಧಿ ಇಲಾಖೆಯ ಹೊಸ ಕಾನೂನು ಹಾಗೂ ನಿಯಮದಿಂದ ಈಗಾಗಲೇ ಕಾರ್ಮಿಕರು ಸಮಸ್ಯೆಗೆ ಒಳಗಾಗಿದ್ದಾರೆ. ಇದೀಗ ವಂತಿಗೆದಾರರ ದಾಖಲೆಗಳಲ್ಲಿ ಕೆಲವೊಂದು ಸಣ್ಣಪುಟ್ಟ ತಿದ್ದುಪಡಿಗೆ ಸಂಬಂಧಿಸಿ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ವಂತಿಗೆದಾರರನ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿದ್ದಾಗ, ಅದನ್ನು ಡಿಡಿಪಿಐ ಅಥವಾ ಶಾಲಾ ಮುಖ್ಯಸ್ಥರಿಗೆ ಕಳುಹಿಸಲಾಗುತ್ತದೆ. ಇದರಿಂದ ಅನಗತ್ಯ ಗೊಂದಲ ಹಾಗೂ ವಿಳಂಬವಾಗುತ್ತಿದ್ದು, ಇದು ವಂತಿಗೆದಾರರಿಗೆ ಭವಿಷ್ಯ ನಿಧಿ ಹಣ ಹಾಗೂ ಪಿಂಚಣಿಯನ್ನು ತಿರಸ್ಕರಿಸುವ ಅಥವಾ ವಿಳಂಬ ಮಾಡುವ ಷಡ್ಯಂತ್ರ ಎಂದು ಆರೋಪಿಸಿದರು.

ವಂತಿಗೆದಾರರ ದಾಖಲೆ ತಿದ್ದುಪಡಿಗೆ ಅಡಚಣೆ ಆಗಬಾರದು. ವಂತಿಗೆದಾರರ ಹೆಸರು ತಂದೆಯ ಹೆಸರು, ಜನ್ಮ ದಿನಾಂಕದ ತಿದ್ದುಪಡಿಯನ್ನು ಆಧಾರ್‌ನಲ್ಲಿ ನಮೂದಿಸಿದಂತೆ ಸರಿಪಡಿಸಬೇಕು ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಎಸ್., ಉಪಾಧ್ಯಕ್ಷೆ ಭವಾನಿ, ಸಂಘಟನಾ ಕಾರ್ಯದರ್ಶಿ ನಮೃತಾ, ಕೋಶಾಧಿಕಾರಿ ಪಿ.ಎಚ್. ಮುಹಮ್ಮದ್, ಜತೆ ಕಾರ್ಯದರ್ಶಿ ಗಿರಿಜಾ ಹಾಗೂ ಪದ್ಮಾವತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News