ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಯುವತಿಯ ಬಂಧನ

Update: 2019-09-24 11:33 GMT

ಹೊಸದಿಲ್ಲಿ, ಸೆ.24: ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಕಾನೂನು ವಿದ್ಯಾರ್ಥಿನಿಯನ್ನು ಮಂಗಳವಾರ ವಿಶೇಷ ತನಿಖಾ ತಂಡ  ಸುಲಿಗೆ ಪ್ರಕರಣವೊಂದರಲ್ಲಿ ಬಂಧಿಸಿದೆ.

ಕಳೆದ ವಾರ ತನಿಖಾ ತಂಡವು ವಿದ್ಯಾರ್ಥಿನಿಯ ಪರಿಚಯದವರಾದ ಸಂಜಯ್ ಸಿಂಗ್, ಸಚಿನ್ ಸೇಂಗರ್ ಹಾಗೂ ವಿಕ್ರಮ್ ಎಂಬವರನ್ನು ಈ ಪ್ರಕರಣದಲ್ಲಿ ಬಂಧಿಸಿತ್ತಲ್ಲದೆ, ಚಿನ್ಮಯಾನಂದನಿಂದ 5 ಕೋಟಿ  ರೂ. ಸಂಗ್ರಹಿಸುವ ಉದ್ದೇಶದಿಂದ ಆತನಿಗೆ ಸಂದೇಶ ಕಳುಹಿಸಿದ ಆರೋಪ ಅವರ ಮೇಲೆ ಹೊರಿಸಲಾಗಿತ್ತು. ಈ ಎಫ್‍ಐಆರ್ ನಲ್ಲಿ ವಿದ್ಯಾರ್ಥಿನಿಯ ಹೆಸರಿತ್ತಾದರೂ ಆಕೆಯನ್ನು ಆ ಸಂದರ್ಭ ಬಂಧಿಸಲಾಗಿರಲಿಲ್ಲ.

ಚಿನ್ಮಯಾನಂದನಿಂದ ಹಣ ಪಡೆಯುವ ಸಲುವಾಗಿ ನಡೆಸಲಾದ ಷಡ್ಯಂತ್ರದಲ್ಲಿ ವಿದ್ಯಾರ್ಥಿನಿಯೂ ಶಾಮೀಲಾಗಿದ್ದಾಳೆಂಬುದಕ್ಕೆ ಫೋನ್ ಕರೆ ಹಾಗೂ ವೀಡಿಯೋ ಹಾಗೂ ಸೀಸಿಟಿವಿ ದೃಶ್ಯಗಳ ಸಹಿತ ಡಿಜಿಟಲ್ ಸಾಕ್ಷ್ಯಗಳಿವೆ ಎಂದು ಸಿಟ್ ಮೂಲಗಳು ತಿಳಿಸಿವೆ.

ಆದರೆ ವಿದ್ಯಾರ್ಥಿನಿ ಆರೋಪಗಳನ್ನು ಈ ಹಿಂದೆಯೇ ನಿರಾಕರಿಸಿದ್ದಳಲ್ಲದೆ, ತಾನು ಚಿನ್ಮಯಾನಂದ ವಿರುದ್ಧ ದಾಖಲಿಸಿರುವ ದೂರನ್ನು ದುರ್ಬಲಗೊಳಿಸುವುದೇ ಇದರ ಹಿಂದಿನ ಉದ್ದೇಶ ಎಂದು ದೂರಿದ್ದಳು.

ಸಂತ್ರಸ್ತೆ ಮತ್ತಾಕೆಯ ಆರು ಮಂದಿ ಸ್ನೇಹಿತರು ಜನವರಿಯಿಂದ 4,300 ಕರೆಗಳನ್ನು ಮಾಡಿದ್ದರು ಹಾಗೂ ಹೆಚ್ಚಿನ ಕರೆಗಳು ಆಗಸ್ಟ್ ತಿಂಗಳಲ್ಲಿ ಚಿನ್ಮಯಾನಂದಗೆ  ಬೆದರಿಕೆ ಕರೆ ಮಾಡುವುದಕ್ಕಿಂತ ಮುಂಚೆ ಮಾಡಲಾಗಿತ್ತು ಎಂದು ಸಿಟ್ ಹೇಳಿಕೊಂಡಿದೆ.

ಆಗಸ್ಟ್ 22ರಂದು ಚಿನ್ಮಯಾನಂದಗೆ ಅಪರಿಚಿತ ಸಂಖ್ಯೆಯಿಂದ ಬಂದ ವಾಟ್ಸ್ಯಾಪ್ ಸಂದೇಶದಲ್ಲಿ 5 ಕೋಟಿ ರೂ. ನೀಡದೇ ಇದ್ದರೆ ಆತನ ನಗ್ನ ವೀಡಿಯೋಗಳನ್ನು ಅಂತರ್ಜಾಲದಲ್ಲಿ ಸೋರಿಕೆ ಮಾಡಲಾಗುವುದು ಎಂದು ಬೆದರಿಸಲಾಗಿತ್ತು. ಆದರೆ ಈ ಕುರಿತಂತೆ ಚಿನ್ಮಯಾನಂದ ಪರ ವಕೀಲರು ಪೊಲಿಸ್ ದೂರು ದಾಖಲಿಸುವ ಮೊದಲೇ ವಿದ್ಯಾರ್ಥಿನಿ  ಫೇಸ್ ಬುಕ್ ಪೋಸ್ಟ್ ಮೂಲಕ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಳೆಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News