ಉದಯೋನ್ಮುಖ ಬುಡಕಟ್ಟು ಹಾಕಿ ಆಟಗಾರ್ತಿಯರ ಶವಗಳು ಮರದಲ್ಲಿ ಪತ್ತೆಯಾಗಿ 43 ದಿನ: ನ್ಯಾಯ ಮರೀಚಿಕೆ

Update: 2019-09-24 15:59 GMT
ಕೇಂದ್ರ ಸಚಿವ ರಾಮ ವಿಲಾಸ ಪಾಸ್ವಾನ್ ಜೊತೆ ಶ್ರದ್ಧಾ, ಸುನಂದಿನಿ (Photo: newsclick.in)

ರಾಂಚಿ, ಸೆ.24: ಜಾರ್ಖಂಡ್‌ನ ಸಿಮ್ಡೇಗಾ ಜಿಲ್ಲೆಯ ಅರನಿ ಗ್ರಾಮದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಉದಯೋನ್ಮುಖ ಹಾಕಿ ಆಟಗಾರ್ತಿಯರ ಶವಗಳು ಮರವೊಂದರಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿ 43 ದಿನಗಳು ಕಳೆದಿವೆ. ಘಟನೆಯನ್ನು ಪ್ರತಿಯೊಬ್ಬರೂ ಕಡೆಗಣಿಸಿರುವುದು ಭಾರತದಲ್ಲಿ ಶೋಷಿತರ ಬವಣೆಯನ್ನು ಬಿಂಬಿಸಿರುವ ಬಹುಚರ್ಚಿತ ‘ಆರ್ಟಿಕಲ್ 15’ ಚಿತ್ರವನ್ನು ನೆನಪಿಸುತ್ತಿದೆ.

ಮೃತ ಯುವತಿಯರು ಸಲಿಂಗಕಾಮ ಸಂಬಂಧವನ್ನು ಹೊಂದಿದ್ದರು ಮತ್ತು ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹರಿಬಿಡಲಾಗಿರುವ ಮಾಹಿತಿಯನ್ನೇ ಗಟ್ಟಿಯಾಗಿ ನಂಬಿಕೊಂಡಿರುವ ಪೊಲೀಸರು ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದು,ಅದನ್ನು ಮುಕ್ತಾಯಗೊಳಿಸಲು ಸಜ್ಜಾಗಿದ್ದಾರೆ.

ಜಾರ್ಖಂಡ್‌ನ ಸಿಮ್ಡೇಗಾ ಜಿಲ್ಲೆಯ ಬಾಂಸಜೋರ್ ಗ್ರಾಮದ ನಿವಾಸಿ ಶ್ರದ್ಧಾ ಸೋರೆಂಗ್(14) ಮತ್ತು ಒಡಿಶಾದ ಸುಂದರಗಡ ಜಿಲ್ಲೆಯ ಲಚ್ಚಡಾ ಗ್ರಾಮದ ನಿವಾಸಿ ಸುನಂದಿನಿ ಬಾಗೆ(23) ಮೃತ ಯುವತಿಯರು. ಈ ವರ್ಷದ ಜನವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇವರಿಬ್ಬರೂ ಭರವಸೆದಾಯಕ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಸಚಿವ ರಾಮ ವಿಲಾಸ ಪಾಸ್ವಾನ್ ಅವರನ್ನು ಭೇಟಿಯಾಗುವ ಅವಕಾಶವನ್ನೂ ಪಡೆದಿದ್ದರು. ಅದಾಗಿ ಎಂಟು ತಿಂಗಳು ಕಳೆಯುವಷ್ಟರಲ್ಲೇ ಆ.11ರಂದು ಅವರಿಬ್ಬರ ಶವಗಳು ಶ್ರದ್ಧಾಳ ಮನೆಯಿಂದ 30 ಕಿ.ಮೀ.ದೂರದ ಅರನಿ ಗ್ರಾಮದಲ್ಲಿ ಮರವೊಂದರಿಂದ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಜಾರ್ಖಂಡ್ ಮತ್ತು ಒಡಿಶಾದ ಹೆಚ್ಚಿನೆಲ್ಲ ಮಾಧ್ಯಮಗಳಲ್ಲಿ ಈ ಘಟನೆ ಸುದ್ದಿಯಾಗಿತ್ತು,ಆದರೆ ಯಾರೂ ಅದರ ಬೆಂಬತ್ತಿ ಹೋಗಿರಲಿಲ್ಲ. ಬೆಳವಣಿಗೆಗಳ ಮೇಲೆ ನಿಗಾಯಿರಿಸಿದ್ದ ರಾಂಚಿಯ ಸತ್ಯಶೋಧನಾ ತಂಡವೊಂದು ವಾಸ್ತವವನ್ನು ತಿಳಿಯಲು ಆ.17ರಿಂದ 22ರವರೆಗೆ ಇವೆರಡೂ ರಾಜ್ಯಗಳಿಗೆ ಭೇಟಿ ನೀಡಿತ್ತು.

(ಶ್ರದ್ಧಾ, ಸುನಂದಿನಿ ಮೃತದೇಹಗಳು)

ಶ್ರದ್ಧಾ ಶಾಲೆಗೆ ಹೋಗುತ್ತಿದ್ದಾಗ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು ಮತ್ತು ಒಳ್ಳೆಯ ಹಾಕಿ ಆಟಗಾರ್ತಿಯಾಗಿದ್ದಳು. ಆಕೆಗೆ ಯಾವುದೇ ಚಟವಿರುವ ಬಗ್ಗೆ ದೂರುಗಳು ಇರಲಿಲ್ಲ. ತಮ್ಮ ಶಾಲೆಯಲ್ಲಿರುವ ಹೆಚ್ಚಿನ ಪದಕ ಮತ್ತು ಟ್ರೋಫಿಗಳನ್ನು ಶ್ರದ್ಧಾಳೇ ಗೆದ್ದು ತಂದಿದ್ದಳು ಎಂದು ಅಧಿಕಾರಿಗಳೂ ಹೇಳಿದ್ದರು. ಮಾನಸಿಕ ಅಸ್ವಸ್ಥ ಮಗುವೊಂದನ್ನು ರಕ್ಷಿಸಲು ಆಕೆ ಒಮ್ಮೆ ಬಾವಿಗೂ ಜಿಗಿದಿದ್ದಳು,ಆಕೆ ಉತ್ತಮ ಈಜುಗಾರ್ತಿಯಾಗಿದ್ದಳು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರೋರ್ವರು ತಂಡಕ್ಕೆ ತಿಳಿಸಿದ್ದರು.

(ಆರ್ಟಿಕಲ್ 15 ಚಿತ್ರದ ದೃಶ್ಯ)

ನಾವು ಪ್ರಕರಣದ ತನಿಖಾಧಿಕಾರಿಯನ್ನು ಭೇಟಿಯಾಗಿ ವಿಚಾರಿಸಿದಾಗ ಇದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದ್ದರು. ನಾವು ಕೆದಕಿದಾಗ ಅವರಿಬ್ಬರೂ ಸಲಿಂಗಕಾಮಿಗಳಾಗಿದ್ದರು ಮತ್ತು ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುನಂದಿನಿಯೊಂದಿಗೆ ವಾಸವಿದ್ದ ಪುಷ್ಪಾ ಲೋಹಾರ್ ಎಂಬಾಕೆಯ ಹೇಳಿಕೆಯನ್ನು ಉಲ್ಲೇಖಿಸಿ ಸಮರ್ಥಿಸಿಕೊಂಡಿದ್ದರು ಎಂದು ತಂಡದ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತೆ ತಾರಾಮಣಿ ಸಾಹು ಸುದ್ದಿಸಂಸ್ಥೆ ಇನ್ಯೂಸ್‌ರೂಮ್‌ಗೆ ತಿಳಿಸಿದ್ದಾರೆ.

ಶ್ರದ್ಧಾ ಮತ್ತು ಸುನಂದಿನಿಗೆ ಮೆರ್ರಿ ಪೂರ್ಟಿ ಎಂಬ ಹವ್ಯಾಸಿ ಕೋಚ್ ತರಬೇತಿ ನೀಡುತ್ತಿದ್ದು,ಆಕೆ ಸುನಂದಿನಿಯ ನೆರೆಯ ಗ್ರಾಮದ ನಿವಾಸಿಯಾಗಿದ್ದಾಳೆ. ಎರಡು ವರ್ಷಗಳಿಂದ ಸುನಂದಿನಿ ಆಕೆಯ ಮನೆಯಲ್ಲಿಯೇ ವಾಸವಿದ್ದಳು.

ದಿಲ್ಲಿ ಟೂರ್ನಮೆಂಟ್‌ನ ಬಳಿಕ ಶ್ರದ್ಧಾಳ ಹೆತ್ತವರನ್ನು ಸಂಪರ್ಕಿಸಿದ್ದ ಮೆರ್ರಿ ಆಕೆಗೆ ಹಾಕಿ ತರಬೇತಿ ನೀಡುವ ಮತ್ತು ಶಾಲೆಗೆ ಸೇರಿಸುವ ಭರವಸೆಯೊಂದಿಗೆ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಳು. ಆದರೆ ಶ್ರದ್ಧಾಳನ್ನು ಶಾಲೆಗೆ ಸೇರಿಸಿರಲಿಲ್ಲ.

ಪೂರ್ಟಿ ಮತ್ತು ಪೊಲೀಸರ ಹೇಳಿಕೆಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ತಂಡವು ಗಮನಿಸಿದೆ. ಶಾಲಾ ದಾಖಲೆಗಳಲ್ಲಿ ಶ್ರದ್ಧಾಳ ವಯಸ್ಸು 14 ವರ್ಷ ಎಂದಿದ್ದರೂ ಆಕೆಗೆ 18 ವರ್ಷ ಪ್ರಾಯವಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಶವಗಳು ಪತ್ತೆಯಾಗುವ ಒಂದು ದಿನ ಮೊದಲೇ, ಆ.10ರಂದು ಪೂರ್ಟಿಯ ಪುತ್ರಿ ಸೋನಂ ಸುನಂದಿನಿಯ ಲಗೇಜ್‌ನ್ನು ಆಕೆಯ ಮನೆಗೆ ತಲುಪಿಸಿದ್ದಳು ಮತ್ತು ಆಕೆ ಮರಳುವುದಿಲ್ಲ ಎಂದು ಹೆತ್ತವರಿಗೆ ತಿಳಿಸಿದ್ದಳು. ಆದರೆ ಪೊಲೀಸರು ಈ ಮಹತ್ವದ ಅಂಶದ ಕುರಿತು ತನಿಖೆಯನ್ನು ನಡೆಸಿಲ್ಲ ಎಂದು ಸಹಾ ಬೆಟ್ಟು ಮಾಡಿದ್ದಾರೆ.

ಸುನಂದಿನಿ ಆ.10ರಂದು ಬೆಳಿಗ್ಗೆ ನಾಲ್ಕು ಗಂಟೆಗೇ ಯಾರಿಗೂ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದಳು ಮತ್ತು ಆಕೆಯ ನಾಪತ್ತೆಯ ಬಗ್ಗೆ ನಾವು ದೂರು ದಾಖಲಿಸಿರಲಿಲ್ಲ. ತನ್ನೊಂದಿಗೆ ನಿಕಟ ಸ್ನೇಹ ಹೊಂದಿದ್ದ ಸುನಂದಿನಿ ಹೇಳದೇ ಹೊರಟು ಹೋಗಿದ್ದು ಸೋನಮ್‌ಗೆ ಸಿಟ್ಟು ತರಿಸಿತ್ತು ಮತ್ತು ಇದೇ ಕಾರಣದಿಂದ ಆಕೆ ಸುನಂದಿನಿಯ ಲಗೇಜ್‌ನ್ನು ಆಕೆಯ ಮನೆಗೆ ತಲುಪಿಸಿದ್ದಳು ಎಂದು ಪೂರ್ಟಿ ಕುಟುಂಬ ಸಮಜಾಯಿಷಿ ನೀಡಿದೆ.

ಶ್ರದ್ಧಾ ಮತ್ತು ಸುನಂದಿನಿ ಘಟನಾ ಸ್ಥಳದ ಬಳಿ ಕೊನೆಯ ಬಾರಿ ಕಂಡು ಬಂದಿದ್ದಾಗ ವಾಹನವೊಂದು ಅವರನ್ನು ಸಮೀಪಿಸಿದ್ದನ್ನು ಅರನಿ ಗ್ರಾಮಸ್ಥರು ನೋಡಿದ್ದಾರೆ. ಹೀಗಾಗಿ ಪೊಲೀಸರು ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ತಂಡವು ಹೇಳಿದೆ.

ಶವಗಳು ಪತ್ತೆಯಾದ ಮರುದಿನವೇ ಶ್ರದ್ಧಾಳ ತಂದೆ ರಾಜೇಶ್ ತನ್ನ ಪುತ್ರಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲಿಸ್ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಈ ದೂರಿನ ಬಗ್ಗೆ ಈ ವರೆಗೂ ಕ್ರಮ ಕೈಗೊಂಡಿಲ್ಲ. ಬಾಂಸಜೋರ್ ಗ್ರಾಮಸ್ಥರು ಈಗ ಪೂರ್ಟಿ ಕುಟುಂಬದ ಮೇಲೆ ಶಂಕೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಮತ್ತು ಡಿಜಿಪಿಗೆ ಅವಹಾಲು ಸಲ್ಲಿಸಿದ್ದಾರೆ.

ಈವರೆಗೆ ಪ್ರಕರಣದಲ್ಲಿ ಯಾವುದೇ ಶಂಕಾಸ್ಪದ ಅಂಶ ಕಂಡು ಬಂದಿಲ್ಲ. ಆದರೆ ಪ್ರಕರಣದಲ್ಲಿ ಯಾವುದೇ ಹೊಸ ಮಾಹಿತಿಯನ್ನು ನಾವು ಸ್ವಾಗತಿಸುತ್ತೇವೆ ಎಂದು ಎಸ್‌ಪಿ ಸಂಜೀವ ಕುಮಾರ ಅವರು ತನ್ನನ್ನು ಸಂಪರ್ಕಿಸಿದ ಸತ್ಯಶೋಧನಾ ತಂಡಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News