ಈರುಳ್ಳಿ ಬೆಲೆ ಏರಿಕೆ: ಸಂಗ್ರಹಕಾರರಿಗೆ ಸಚಿವರ ಎಚ್ಚರಿಕೆ

Update: 2019-09-24 16:31 GMT

ಹೊಸದಿಲ್ಲಿ, ಸೆ. 24: ಕರ್ನಾಟಕ, ಮಹಾರಾಷ್ಟ್ರದಂತಹ ತರಕಾರಿ ಬೆಳೆಸುವ ಪ್ರಮುಖ ರಾಜ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆಯಿಂದ ತರಕಾರಿ ಸರಬರಾಜು ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ. ಆದುದರಿಂದ ಈರುಳ್ಳಿ ದಾಸ್ತಾನು ಮಾಡದಂತೆ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಂಗಳವಾರ ಸಂಗ್ರಹಕಾರರು ಹಾಗೂ ಕಾಳದಂಧೆಕೋರರಿಗೆ ಎಚ್ಚರಿಕೆ ನೀಡಿದ್ದಾರೆ.

 ‘‘ನಮ್ಮಲ್ಲಿ 50,000 ಟನ್ ಕಾಯ್ದಿರಿಸಿದ ಸಂಗ್ರಹ ಇದೆ ಎಂದು ಸಂಗ್ರಹಕಾರರಿಗೆ ಮಾಹಿತಿ ನೀಡಲು ನಾನು ಬಯಸುತ್ತೇನೆ. ತೊಂದರೆಗೊಳಗಾದ ರಾಜ್ಯಗಳು ನಪೆಡ್ ಹಾಗೂ ನ್ಯಾಶನಲ್ ಕೋ-ಆಪರೇಟಿವ್ ಕನ್ಸೂಮರ್ಸ್‌ನಂತಹ ಏಜೆನ್ಸಿಗಳ ಮೂಲಕ ತಮ್ಮ ಪೂರೈಕೆ ಹೆಚ್ಚಿಸಿಕೊಳ್ಳಬಹುದು’’ ಎಂದು ಪಾಸ್ವಾನ್ ಹೇಳಿದರು.

ಅಲ್ಲದೆ, ಈ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಮಹಾರಾಷ್ಟ್ರದಂತಹ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ನೆರೆ ಸಂಭವಿಸಿರುವುದರಿಂದ ಪೂರೈಕೆಗೆ ಅಡ್ಡಿ ಉಂಟಾಗಿದೆ. ಇದರಿಂದ ಕಳೆದ ಒಂದು ತಿಂಗಳಿಂದ ಈರುಳ್ಳಿಯ ಬೆಲೆ ಕ್ರಮೇಣ ಹೆಚ್ಚಾಗಿದೆ. ಕಳೆದ ವಾರ ಸುರಿದ ಮಳೆ ಪೂರೈಕೆ ಮೇಲೆ ಇನ್ನಷ್ಟು ಪರಿಣಾಮ ಬೀರಿದೆ. ಇದರಿಂದ ಹೊಸದಿಲ್ಲಿಯಲ್ಲಿ ಹಾಗೂ ದೇಶದ ಇತರ ಭಾಗಗಳಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 70ರಿಂದ 80ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

 ಹೊಸದಿಲ್ಲಿಯ ಸಗಟು ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಆ್ಯಪಲ್‌ಗಿಂತ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಕೇಂದ್ರದ ಖಾದಿರಿಸಿದ ದಾಸ್ತನು ಹೆಚ್ಚಿಸಲು ತಮ್ಮ ರಾಜ್ಯಗಳಿಂದ ಪೂರೈಕೆ ಹೆಚ್ಚಿಸುವಂತೆ ರಾಜ್ಯ ಸರಕಾರಗಳಲ್ಲಿ ವಿನಂತಿಸಲಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ. ‘‘ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಅಲ್ಲಿ ಸಾಗಾಟ ಇಲ್ಲ. ನಮ್ಮಲ್ಲಿ 50,000 ಖಾದಿರಿಸಿದ ಸಂಗ್ರಹ ಇತ್ತು. ಇದರಲ್ಲಿ 15,000 ಟನ್‌ಗಳು ಹೊರಗಿದೆ. ಪ್ರಸ್ತುತ 35,000 ಟನ್‌ಗಳು ಇವೆ. ಬೇಡಿಕೆ ಈಡೇರಿಸಲು ಎಲ್ಲ ರಾಜ್ಯ ಸರಕಾರಗಳು ನಮ್ಮಿಂದ ಸೂಕ್ತ ಬೆಲೆ ನೀಡಿ ಖರೀದಿಸಬಹುದು’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News