ಮಂಗಳೂರು: ನೂತನ ಮೋಟರ್ ಕಾಯ್ದೆ, ಅಕ್ರಮ ಟೋಲ್ ಗೇಟ್, ಹೆದ್ದಾರಿ ಸಮಸ್ಯೆ ವಿರುದ್ಧ ಪ್ರತಿಭಟನೆ

Update: 2019-09-25 07:43 GMT

ಮಂಗಳೂರು, ಸೆ.25: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಮೋಟಾರು ಕಾಯ್ದೆ ಹಾಗೂ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸಹಿತ ಹೆದ್ದಾರಿ ಸಮಸ್ಯೆಯನ್ನು ಮುಂದಿಟ್ಟು ವಿವಿಧ ಚಾಲಕ, ಸಾರಿಗೆ ಯೂನಿಯನ್‌ಗಳು, ಸಾಮಾಜಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

 ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕೇಂದ್ರ ಸರಕಾರವು ಇಡೀ ದೇಶಕ್ಕೆ ಅನ್ವಯವಾಗುವಂತೆ ಏಕಾಏಕಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ಇದರ ಹಿಂದೆ ಕಾರ್ಪೊರೇಟ್ ಶಕ್ತಿಗಳನ್ನು ರಕ್ಷಿಸುವ, ಖಾಸಗೀಕರಣಗೊಳಿಸುವ ಹುನ್ನಾರ ಇದೆ. ನೂತನ ವಾಹನ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಎಂ.ಜಿ.ಹೆಗ್ಡೆ ಮಾತನಾಡಿ, ನೂತನ ಮೋಟರ್ ವಾಹನ ತಿದ್ದುಪಡಿ ಕಾಯ್ದೆ ಜನರನ್ನು ದೋಚಲು, ಹಫ್ತಾ ವಸೂಲು ಮಾಡಿರುವ ಕಾಯಿದೆ.ಇದನ್ನು ಪ್ರತಿಭಟಿಸಿ ಮುಂದಿನ ಹಂತದಲ್ಲಿ ಚಾಲಕರು ಸಾಮೂಹಿಕ ಮುಷ್ಕರ ಮಾಡಿ ಪ್ರತಿಭಟಿಸಬೇಕಾದೀತು ಎಂದು ಎಚ್ಚರಿಸಿದರು.

ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. ಕೂಳೂರು ಸೇತುವೆ ಶಿಥಿಲಗೊಂಡು ಕುಸಿಯುವ ಭೀತಿ ಎದುರಾಗಿದೆ. ಆದರೆ ಹೆದ್ದಾರಿ ಪ್ರಾಧಿಕಾರ ತಾಂತ್ರಿಕ ನೆಪಗಳನ್ನು ಮುಂದಿಟ್ಟು ಹೆದ್ದಾರಿ ದುರಸ್ತಿಯಿಂದ ನುಣುಚಿಕೊಳ್ಳುತ್ತಿದೆ ಎಂದು ದೂರಿದರು.

ಸುರತ್ಕಲ್ ಅಕ್ರಮ ಟೋಲ್ ಗೇಟ್ ಹಲವು ಗಡವುಗಳ ನಂತರವೂ ವಾಹನ ಸವಾರರ ಸುಲಿಗೆಯನ್ನು ಮುಂದುವರಿಸಿದೆ. ಈ ನವೆಂಬರ್‌ನಲ್ಲಿ ಇದರ ಸುಂಕ ಸಂಗ್ರಹದ ಗುತ್ತಿಗೆ ಕೊನೆಗೊಳ್ಳುತ್ತಿದ್ದು ಈಗಲಾದರು ಹೆದ್ದಾರಿ ಪ್ರಾಧಿಕಾರ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವ ತನ್ನ ತೀರ್ಮಾನವನ್ನು ಜಾರಿಗೊಳಿಸಬೇಕು. ಆ ಮೂಲಕ ಜನಾಗ್ರಹಕ್ಕೆ, ಹೆದ್ದಾರಿ ನಿಯಮಗಳಿಗೆ ಗೌರವ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.

*ಪ್ರತಿಭಟನಾ ಮೆರವಣಿಗೆ: ಪ್ರತಿಭಟನೆ ಮೊದಲು ಮಿನಿ ವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಬೊಂಡಾಲ ಚಿತ್ತ ರಂಜನ್ ಶೆಟ್ಟಿ, ಅಲಿ ಹಸನ್, ದಿನೇಶ್ ಕುಂಪಲ, ಬಿ.ಕೆ.ಇಮ್ತಿಯಾಝ್, ಪ್ರಕಾಶ್ ಡಿಸೋಜ, ಪ್ರಮೋದ್ ಉಳ್ಳಾಲ, ವಿ. ಕುಕ್ಯಾನ್, ಎಚ್.ವಿ.ರಾವ್, ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ, ಸ್ಟೀವನ್ ಡಿಸೋಜ, ಖಾಲಿದ್ ಉಜಿರೆ, ಅಕ್ಷಿತ್ ಸುವರ್ಣ ಮತ್ತಿತರರು ಭಾಗವಹಿಸಿದ್ದರು.

ರಹ್ಮಾನ್ ಖಾನ್ ಕುಂಜತ್ತ ಬೈಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News