×
Ad

ಅತ್ಯಾಚಾರ ಆರೋಪಿ ಚಿನ್ಮಯಾನಂದಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ: ಬಿಜೆಪಿ

Update: 2019-09-25 19:50 IST

 ಲಕ್ನೋ,ಸೆ.25: ಕಾನೂನು ವಿದ್ಯಾರ್ಥಿನಿಯೋರ್ವಳ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಆರೋಪದಲ್ಲಿ ಕಳೆದ ವಾರ ಬಂಧಿಸಲ್ಪಟ್ಟಿರುವ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಬಿಜೆಪಿ ಸದಸ್ಯನಾಗಿ ಉಳಿದಿಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ವಕ್ತಾರ ಹರೀಶ ಶ್ರೀವಾಸ್ತವ ಅವರು ಬುಧವಾರ ಇಲ್ಲಿ ಹೇಳಿದರು.

ತನ್ಮೂಲಕ,ಮೂರು ಬಾರಿ ಬಿಜೆಪಿ ಸಂಸದನಾಗಿದ್ದು,ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಸಹಾಯಕ ಗೃಹ ಸಚಿವನಾಗಿದ್ದ ಚಿನ್ಮಯಾನಂದ (72) ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದ ತಿಂಗಳ ಬಳಿಕ ಡ್ಯಾಮೇಜ್ ಕಂಟ್ರೋಲ್‌ಗೆ ಪಕ್ಷವು ಮುಂದಾಗಿದೆ.

ಬಿಜೆಪಿಯ ವಕ್ತಾರನಾಗಿ,ಜವಾಬ್ದಾರಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ. ಚಿನ್ಮಯಾನಂದ ಬಿಜೆಪಿ ಸದಸ್ಯನಲ್ಲ ಮತ್ತು ಆತನ ವಿರುದ್ಧ ಕಾನೂನು ತನ್ನದೇ ದಾರಿಯಲ್ಲಿ ಸಾಗುತ್ತದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶ್ರೀವಾಸ್ತವ ಹೇಳಿದರು.

 ಚಿನ್ಮಯಾನಂದ ಎಂದಿನಿಂದ ಬಿಜೆಪಿ ಸದಸ್ಯನಾಗಿ ಉಳಿದಿಲ್ಲ ಎಂಬ ಪ್ರಶ್ನೆಗೆ, “ಬಹಳ ಸಮಯವಾಗಿದೆ ಎಂದು ನಾನು ಭಾವಿಸಿದ್ದೇನೆ. ಬಹುಶಃ ಆತ ಚುನಾವಣೆಯಲ್ಲಿ ಗೆದ್ದು ಸಚಿವ ಹುದ್ದೆಯನ್ನು ಅನುಭವಿಸಿದ ಬಳಿಕ? ಇದು ದಾಖಲೆಗಳ ಪ್ರಶ್ನೆಯಲ್ಲ ಮತ್ತು ನಿಖರ ದಿನಾಂಕವನ್ನು ಹೇಳಲು ಸಾಧ್ಯವಿಲ್ಲ. ಆದರೆ ಚಿನ್ಮಯಾನಂದ ಬಿಜೆಪಿ ಸದಸ್ಯನಲ್ಲ” ಎಂದು ಶ್ರೀವಾಸ್ತವ ಉತ್ತರಿಸಿದರು.

ಆಗಸ್ಟ್‌ನಲ್ಲಿ ಚಿನ್ಮಯಾನಂದ ವಿರುದ್ಧ ಆರೋಪ ಕೇಳಿ ಬಂದ ನಂತರ ಇದು ಬಿಜೆಪಿಯ ಮೊದಲ ಹೇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News