ಸಂಘಪರಿವಾರದ ಬೆದರಿಕೆ ಕರೆ: ನೋಟು ರದ್ಧತಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ರದ್ದು

Update: 2019-09-25 14:36 GMT

ಹೊಸದಿಲ್ಲಿ, ಸೆ.25: ಕೇಂದ್ರ ಸರಕಾರ 2016ರಲ್ಲಿ ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಚಹಾ ಮಾರಾಟಗಾರನೊಬ್ಬ ನಡೆಸಿದ ಪ್ರತಿಭಟನೆಯ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಸಂಘ ಪರಿವಾರದ ಬೆದರಿಕೆ ಕರೆಯ ಕಾರಣ ಕೈಬಿಡಲಾಗಿದೆ ಎಂದು ದಿಲ್ಲಿಯ ಕೇರಳ ಕ್ಲಬ್ ತಿಳಿಸಿದೆ.

ಸಾಕ್ಷ್ಯಚಿತ್ರ ಪ್ರದರ್ಶನದ ಬಳಿಕ ಆರ್ಥಿಕ ಬಿಕ್ಕಟ್ಟಿನ ಕುರಿತು ಹಿರಿಯ ಪತ್ರಕರ್ತರ ಭಾಷಣ ಕಾರ್ಯಕ್ರಮವೂ ಇತ್ತು. ಆದರೆ ಈ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಹೀಗೆ ಮಾಡಿರುವುದಾಗಿ ಸಾಕ್ಷ್ಯಚಿತ್ರದ ನಿರ್ದೇಶಕ ಸಾನು ಕುಮ್ಮಿಲ್ ಹೇಳಿದ್ದಾರೆ.

‘ದಿ ಕ್ಲೋನ್ ಸಿನೆಮ ಆಲ್ಟರ್ನೇಟಿವ್’ ಎಂಬ ಕೇರಳೀಯರ ಸಂಘಟನೆಯ ಸಹಕಾರದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ‘ಒರು ಚಾಯಕ್ಕಡಕ್ಕರಂಡೆ ಮನ್ ಕಿ ಬಾತ್( ಚಹಾ ಮಾರಾಟಗಾರನೊಬ್ಬನ ಮನದ ಮಾತು) ಎಂಬ ಶೀರ್ಷಿಕೆಯ ಈ ಸಾಕ್ಷ್ಯಚಿತ್ರದಲ್ಲಿ ನೋಟು ರದ್ದತಿಯ ಬಳಿಕ ಕೊಲ್ಲಂನಲ್ಲಿ ಚಹಾ ಮಾರುತ್ತಿರುವ ವ್ಯಕ್ತಿಯೊಬ್ಬನ ದುರವಸ್ಥೆಯ ಕಥನವಿದೆ. ಪ್ರತಿಭಟನೆಯ ಸಂಕೇತವಾಗಿ ಅರ್ಧ ತಲೆ ಬೋಳಿಸಿಕೊಂಡಿರುವ ಈ ವ್ಯಕ್ತಿ, ನೋಟು ರದ್ದತಿಯ ಪ್ರಥಮ ವಾರ್ಷಿಕ ದಿನದಂದು ತನ್ನ ಅರ್ಧ ಮೀಸೆಯನ್ನೂ ಬೋಳಿಸಿಕೊಳ್ಳುತ್ತಾನೆ. ತನ್ನಲ್ಲಿರುವ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಮಾರುದ್ದದ ಸರತಿ ಸಾಲಿನಲ್ಲಿ ನಿಂತು ಬಸವಳಿಯುವ ಈತ ಅಲ್ಲೇ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಬಳಿಕ ಮನೆಗೆ ಮರಳಿದವನೇ ತನ್ನಲ್ಲಿದ್ದ ಎಲ್ಲಾ ಹಳೆಯ ನೋಟುಗಳನ್ನು ಸುಟ್ಟು ಹಾಕುತ್ತಾನೆ.

 ಕೇರಳ ಕ್ಲಬ್ ಯಾವುದೇ ರಾಜಕೀಯ ಸಂಘಟನೆಯ ಜೊತೆ ಗುರುತಿಸಿಕೊಂಡಿಲ್ಲ ಎಂದು ಕ್ಲಬ್‌ನ ಆಡಳಿತ ಸಮಿತಿ ಸದಸ್ಯ ಎಜೆ ಫಿಲಿಪ್ ಹೇಳಿದ್ದಾರೆ. ಆದರೂ ಸಂಘ ಪರಿವಾರದವರು ಬೆದರಿಕೆ ಒಡ್ಡಿದ್ದಾರೆ. ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಪ್ರೊಜೆಕ್ಟರ್ ಅನ್ನು ಬಾಡಿಗೆಗೆ ತರುವ ಕಾರಣ ಅದಕ್ಕೆ ಹಾನಿಯಾದರೆ ಸಮಸ್ಯೆಯಾಗುತ್ತದೆ ಎಂದು ಫಿಲಿಪ್ ಹೇಳಿದ್ದಾರೆ. ಬಳಿಕ ದಿಲ್ಲಿಯಲ್ಲಿ ಕೇರಳದ ವಿಶೇಷ ಪ್ರತಿನಿಧಿಯಾಗಿರುವ ಎ ಸಂಪತ್ ಅವರ ನೆರವಿನಿಂದ ದಿಲ್ಲಿ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗಿದೆ. ಅರ್ಧ ಗಂಟೆಯ ಈ ಸಾಕ್ಷ್ಯಚಿತ್ರ ಕಳೆದ ಜೂನ್‌ನಲ್ಲಿ ಕೇರಳದಲ್ಲಿ ನಡೆದ 11ನೇ ಅಂತರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News