ಭಾರತದ ಯುವತಿ ಪಾಯಲ್‌ಗೆ ಗೇಟ್ಸ್ ಫೌಂಡೇಶನ್ ನ ‘ಚೇಂಜ್‌ಮೇಕರ್’ ಪುರಸ್ಕಾರ
ನ್ಯೂಯಾರ್ಕ್, ಸೆ.25: ಬಾಲ ಕಾರ್ಮಿಕರ ಬಳಕೆ ಹಾಗೂ ಬಾಲ್ಯ ವಿವಾಹ ವಿರುದ್ಧ ಅಭಿಯಾನ ನಡೆಸಿದ್ದ ರಾಜಸ್ತಾನದ ಯುವತಿ ಪಾಯಲ್ ಜಾಂಗಿದ್, ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ನೀಡುವ ಪ್ರತಿಷ್ಠಿತ ‘ಚೇಂಜ್‌ಮೇಕರ್’ ಪುರಸ್ಕಾರ ಪಡೆದಿದ್ದಾರೆ.
ಮಂಗಳವಾರ ನಡೆದ ‘ಗೋಲ್‌ಕೀಪರ್ಸ್ ಗ್ಲೋಬಲ್ ಗೋಲ್ಸ್ ಅವಾರ್ಡ್’ ಕಾರ್ಯಕ್ರಮದಲ್ಲಿ ಈ ಪ್ರತಿಷ್ಠಿತ ಪುರಸ್ಕಾರ ಪ್ರದಾನ ಮಾಡಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲಿಯೇ ತನಗೆ ವಿವಾಹ ಮಾಡಿರುವುದನ್ನು ವಿರೋಧಿಸಿ ಹೋರಾಡಿದ್ದ ಪಾಯಲ್, ಬಾಲ್ಯ ವಿವಾಹವನ್ನು ವಿರೋಧಿಸಿ ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಪೋಷಕರ ಮನ ಒಲಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ರ್ಯಾಲಿಗಳನ್ನು ಆಯೋಜಿಸುವುದು, ಮನೆ ಮನೆಗೆ ತೆರಳಿ ಮಾಹಿತಿ ನೀಡುವುದು, ಪೋಸ್ಟರ್‌ಗಳ ಮೂಲಕ ಜನಜಾಗೃತಿ, ಗೋಡೆಗಳಲ್ಲಿ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. “ನಮ್ಮ ವಿದ್ಯಾಭ್ಯಾಸಕ್ಕೆ ಪೋಷಕರು ತಡೆಯೊಡ್ಡುತ್ತಿದ್ದಾರೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ನಾವು ಕಠಿಣ ಪರಿಶ್ರಮ ಪಡುತ್ತಿದ್ದೇವೆ. ವಿಶ್ವದಲ್ಲಿ ಶಿಕ್ಷಣದಿಂದ ವಂಚಿತವಾದ ಪ್ರತಿಯೊಂದು ಮಗುವಿಗೂ ಸಹಾಯ ನೀಡಿ ಅವಕಾಶ ಕಲ್ಪಿಸುವ ಅಗತ್ಯವಿದೆ” ಎಂದು ಪಾಯಲ್ ಹೇಳಿದ್ದಾರೆ.
ತನ್ನ ಮಗಳ ಪ್ರಯತ್ನದ ಫಲವಾಗಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ. ಅವಳು ಪ್ರಮುಖ ಸುಧಾರಣೆಗೆ ಕಾರಣವಾಗಿದ್ದಾರೆ. ಬಹುತೇಕ ಎಲ್ಲಾ ಮಕ್ಕಳೂ ಈಗ ಶಾಲೆಗೆ ಹೋಗುತ್ತಿದ್ದಾರೆ. ಕಳೆದ ಒಂದು ದಶಕದಿಂದ ಗ್ರಾಮದಲ್ಲಿ ಬಾಲ್ಯವಿವಾಹದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಪಾಯಲ್ ತಂದೆ ಪಪ್ಪೂರಾಮ್ ಜಾಂಗಿದ್ ಹೇಳಿದ್ದಾರೆ.
ನೋಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಪಾಯಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. “ನಮ್ಮ ಪುತ್ರಿ ನ್ಯೂಯಾರ್ಕ್‌ನಲ್ಲಿ ಪ್ರತಿಷ್ಠಿತ ಪುರಸ್ಕಾರ ಪಡೆದಿರುವುದು ಹೆಮ್ಮೆಯ ವಿಚಾರ. ತನ್ನ ವಿವಾಹವನ್ನು ತಿರಸ್ಕರಿಸಿದ ಆಕೆ ಇಡೀ ಗ್ರಾಮವನ್ನು ಬಾಲ್ಯ ವಿವಾಹದಿಂದ ಮುಕ್ತಗೊಳಿಸಿದ್ದಾಳೆ” ಎಂದು ಸತ್ಯಾರ್ಥಿ ಅಭಿನಂದಿಸಿದ್ದಾರೆ.