16ನೇ ವಯಸ್ಸಿಗೇ 104 ಚಿನ್ನ ಗೆದ್ದ ಚೈತ್ರಾಶ್ರೀ

Update: 2019-09-25 16:41 GMT

ಬೆಂಗಳೂರು, ಸೆ.25: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆ ಮಾಡುತ್ತಿದ್ದಾರೆ. ಇದೀಗ ಅದರ ಸಾಲಿಗೆ ಸಣ್ಣ ಆಟೋ ಮೊಬೈಲ್ಸ್ ಅಂಗಡಿಯಿಟ್ಟುಕೊಂಡವರೊಬ್ಬರ ಮಗಳು ಸೇರಿದ್ದು, ಕರಾಟೆಯಲ್ಲಿ ಅಪಾರವಾದ ಸಾಧನೆ ಮಾಡಿ ದೇಶ-ವಿದೇಶದಲ್ಲಿ ಗಮನ ಸೆಳೆದಿದ್ದಾಳೆ.

ರಾಜ್ಯದ ರಾಜಧಾನಿಯ ಯುವತಿ ಎನ್.ಚೈತ್ರಾಶ್ರೀ ಎಂಬಾಕೆ ಅತಿ ಸಣ್ಣ ವಯಸ್ಸಿನಲ್ಲಿಯೇ ಕರಾಟೆಯಲ್ಲಿ ದೇಶ, ವಿದೇಶಗಳಲ್ಲಿ ತನ್ನ ಸಾಧನೆ ತೋರಿದ್ದು, ದೇಶದ ಹೆಮ್ಮೆಯನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮೆರೆದಿದ್ದಾಳೆ.

ಆತ್ಮರಕ್ಷಣೆಗಾಗಿಯೇ ಇರುವಂತಹ ಕಲೆ ಕರಾಟೆ. ಅತಿ ವೇಗವಾಗಿ ದೇಹದ ಚಲನೆಯೊಂದಿಗೆ ಮನಸ್ಸನ್ನು ಕ್ರಿಯಾಶೀಲತೆಯಿಂದ ಇರಿಸಿಕೊಳ್ಳಲು ಕರಾಟೆ ಸಹಕಾರಿ. ಇಂತಹ ಕರಾಟೆಯಲ್ಲಿ ನಗರದ 16 ವರ್ಷದ ಬಾಲಕಿ ಚೈತ್ರಾ ಚಿನ್ನದಂತಹ ಸಾಧನೆ ಮಾಡಿದ್ದಾಳೆ.

ನಗರದ ಖಾಸಗಿ ಶಾಲೆಯಲ್ಲಿ ಎಸೆಸೆಲ್ಸಿ ಪೂರ್ತಿ ಮಾಡಿ ಇದೀಗ ಇಲ್ಲಿನ ಶ್ರೀಚೈತನ್ಯ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ ಈ ಚೈತ್ರಾಶ್ರೀ. ಎಸೆಸೆಲ್ಸಿಯಲ್ಲಿ ಶೇ.90 ರಷ್ಟು ಅಂಕಗಳನ್ನು ಪಡೆದಿರುವ ಈಕೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾಳೆ.

104 ಚಿನ್ನ ಪದಕ ಪಡೆದ ಬಾಲೆ: ಸುಮಾರು ಒಂಬತ್ತು ವರ್ಷಗಳಿಂದ ನಿರಂತರವಾಗಿ ಕರಾಟೆಯನ್ನು ಕಲಿಯುತ್ತಿರುವ ಈಕೆ ಸೆ.22 ರಂದು ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಎರಡು ಚಿನ್ನ ಸೇರಿದಂತೆ ಇದುವರೆಗೂ 104 ಚಿನ್ನದ ಪದಕಗಳು, 21 ಬೆಳ್ಳಿ ಪದಕಗಳು ಮತ್ತು 17 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾಳೆ. ಸೆನ್ಸೆ ಮಹಾಲಕ್ಷ್ಮಿ ಹಾಗೂ ಸೆನ್ಸೆ ಜಯಕುಮಾರ್ ಚೈತ್ರಾಶ್ರೀಗೆ ಬೆನ್ನೆಲುಬಾಗಿ ನಿಂತು ಕರಾಟೆ ಕಲಿಸುತ್ತಿದ್ದಾರೆ.

ತಂದೆಯೇ ನನಗೆ ಸ್ಪೂರ್ತಿ: ವಿದ್ಯಾರ್ಥಿನಿಯ ಸಾಧನೆಯ ಹಿಂದೆ ಅವರ ಅಪ್ಪ-ಅಮ್ಮರ ಅಪಾರ ಪರಿಶ್ರಮವಿದೆ. ಅಪ್ಪ ಎಲ್ಲಿ ಟೂರ್ನಮೆಂಟ್ ನಡೆದರೂ ಮಗಳನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು. ಸೋಲು-ಗೆಲುವು ಮುಖ್ಯವಲ್ಲ, ಆದರೆ, ಸ್ಪರ್ಧೆ ಮಾಡುವುದು ಬಹಳ ಮುಖ್ಯ ಎಂದು ತಂದೆ ಹೇಳುತ್ತಿದ್ದರು. ಅವರ ಸ್ಪೂರ್ತಿಯೇ ನಾನಿಂದು ಇಷ್ಟರ ಮಟ್ಟಿಗೆ ಬೆಳೆಯಲು ಪ್ರೇರಣೆಯಾಯಿತು ಎಂದು ಚೈತ್ರಾಶ್ರೀ ಹೇಳುತ್ತಾರೆ.

ಚೈತ್ರಾಶ್ರೀ ಇಷ್ಟಕ್ಕೆ ನಿಲ್ಲದೆ, ಆಕೆ ತೆಲಂಗಾಣದಲ್ಲಿ ಎರಡು ಬಾರಿ ರೇಂಜರ್ ಸೈಕಲ್ ನಲ್ಲಿಯೂ ಗೆದ್ದಿದ್ದಾಳೆ. 2014 ರಲ್ಲಿ ಪೋಲೆಂಡ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಚಿನ್ನದ ಪದಕ, 2015 ರಲ್ಲಿ ಸರ್ಬಿಯಾದಲ್ಲಿ ನಡೆದ ಪಂದ್ಯದಲ್ಲಿ ಚಿನ್ನ ಗೆಲ್ಲುವ ಮೂಲಕ ಅಲ್ಲಿಯೂ ದೇಶದ ಧ್ವಜ ಹಾರಿಸಿದ್ದಾಳೆ.

ಅಲ್ಲದೆ, ಹೊಸದಿಲ್ಲಿಯ ಕೆಎಐ ರಾಷ್ಟ್ರೀಯ ಬೆಳ್ಳಿ ಪದಕ, ಕೋಲ್ಕತ್ತಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದಿದ್ದರೆ, ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಎರಡು ಚಿನ್ನ ಪದಕಗಳು ಪಡೆದುಕೊಂಡಿದ್ದಾಳೆ. ಇವಳ ಸಾಧನೆಯನ್ನು ಗುರುತಿಸಿ ಬಿಬಿಎಂಪಿಯಿಂದ ನೀಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು 2018 ರಲ್ಲಿ ನೀಡಿ ಗೌರವಿಸಲಾಗಿದೆ.

ಮುಂದಿನ ಗುರಿ: ನಾನು ಕರಾಟೆಯಲ್ಲಿ ದೇಶ, ವಿದೇಶದಲ್ಲಿ ಸ್ಪರ್ಧೆ ಮಾಡಿರುವುದು ಬಹಳ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎಂಬುದು ಕನಸಾಗಿದೆ. ಅದರ ಜತೆಗೆ, ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿ, ಪತ್ರಕರ್ತೆಯಾಗಬೇಕು ಎಂಬ ಆಸೆಯಿದೆ ಎಂಬುದು ಚೈತ್ರಾಶ್ರೀ ಮಾತು.

ಸರಕಾರದ ಸಹಕಾರ ಅಗತ್ಯ: ಸರಕಾರಗಳು ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮದು ಮಧ್ಯಮ ಕುಟುಂಬ. ದೇಶ, ವಿದೇಶಗಳಲ್ಲಿ ಸ್ಪರ್ಧೆಗೆ ಹೋಗುವ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಮೂರು ಬಾರಿ ರಾಜ್ಯ ಕ್ರೀಡಾ ಇಲಾಖೆಗೆ ಪತ್ರ ಬರೆದಿದ್ದರೂ, ಕರಾಟೆಗೆ ನಮ್ಮ ಬಳಿ ಹಣವಿಲ್ಲ ಎಂದು ಮರು ಉತ್ತರ ಬರುತ್ತಿದೆ. ಇದರ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ ಎಂಬುದು ಚೈತ್ರಾಶ್ರೀ ಕೋರಿಕೆಯಾಗಿದೆ. 

-ದೇಶ-ವಿದೇಶಗಳಲ್ಲಿನ ಸ್ಪರ್ಧೆಗಳಲ್ಲಿ ಭಾಗಿ

-104 ಚಿನ್ನ, 21 ಬೆಳ್ಳಿ, 17 ಕಂಚು ಗೆದ್ದಿದ್ದಾಳೆ

-ಒಂಬತ್ತು ವರ್ಷಗಳಿಂದ ಕರಾಟೆಯಲ್ಲಿ ಸ್ಪರ್ಧೆ

Writer - -ಬಾಬುರೆಡ್ಡಿ ಚಿಂತಾಮಣಿ

contributor

Editor - -ಬಾಬುರೆಡ್ಡಿ ಚಿಂತಾಮಣಿ

contributor

Similar News