ಕಾಶ್ಮೀರ ಕಣಿವೆ ಸತತ 52ನೇ ದಿನವೂ ಸ್ತಬ್ಧ
ಶ್ರೀನಗರ, ಸೆ.25: ಕಾಶ್ಮೀರ ಕಣಿವೆಯಲ್ಲಿ ಸತತ 52ನೇ ದಿನ ಬಂದ್ ವಾತಾವರಣ ಮುಂದುವರಿದಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಸರಕಾರಿ ವಾಹನಗಳು ರಸ್ತೆಗಿಳಿದಿಲ್ಲ ಹಾಗೂ ಪ್ರಮುಖ ಮಾರುಕಟ್ಟೆ ಹಾಗೂ ಅಂಗಡಿಗಳು ಬಾಗಿಲು ಮುಚ್ಚಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀನಗರದ ಟಿಆರ್‌ಸಿ ಚೌಕ-ಲಾಲ್ ಚೌಕ ಪ್ರದೇಶದಲ್ಲಿ ಕೆಲವು ಅಂಗಡಿಗಳು ಬಾಗಿಲು ತೆರೆದಿವೆ. ಬೆರಳೆಣಿಕೆಯಷ್ಟು ರಿಕ್ಷಾ ಹಾಗೂ ಕ್ಯಾಬ್‌ಗಳು ಸಂಚರಿಸುತ್ತಿದೆ. ಖಾಸಗಿ ಕಾರುಗಳ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿದೆ. ಈ ಮಧ್ಯೆ, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿರುವುದರಿಂದ ಶಾಲೆಗಳಲ್ಲಿ ತರಗತಿ ಆರಂಭಿಸುವ ಸರಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಉತ್ತರ ಕಾಶ್ಮೀರದ ಹಂದ್ವಾರ ಮತ್ತು ಕುಪ್ವಾರ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಗಳ, ಪ್ರಮುಖವಾಗಿ ಲೀಸ್ ಪಡೆದಿರುವ ಲೈನ್‌ಗಳ ಹಾಗೂ ಬಿಎಸ್ಸೆಎನ್ನೆಲ್ ಬ್ರಾಡ್‌ಬ್ಯಾಂಡ್ ಸೇವೆಗಳ
ಪುನರಾರಂಭಕ್ಕೆ ಸೂಕ್ತ ಸಮಯದಲ್ಲಿ ನಿರ್ಧಾರಕ್ಕೆ ಬರಲಾಗುತ್ತದೆ. ಕಣಿವೆಯ ಯಾವ ಪ್ರದೇಶದಲ್ಲೂ ನಿರ್ಬಂಧ ವಿಧಿಸಲಾಗಿಲ್ಲ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಭದ್ರತಾ ಸಿಬಂದಿಗಳ ನಿಯೋಜನೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.