×
Ad

ಗ್ರೆಟಾ ತನ್‌ಬರ್ಗ್‌ಗೆ ಸ್ವೀಡನ್‌ನ ‘ರೈಟ್ ಲೈವ್‌ಲಿಹುಡ್’ ಪ್ರಶಸ್ತಿ

Update: 2019-09-25 22:25 IST

ಸ್ಟಾಕ್‌ಹೋಮ್ (ಸ್ವೀಡನ್), ಸೆ. 25: ಸ್ವೀಡನ್‌ನ ಹದಿಹರೆಯದ ಪರಿಸರ ಕಾರ್ಯಕರ್ತೆ ಗ್ರೆಟಾ ತನ್‌ಬರ್ಗ್ ‘ರೈಟ್ ಲೈವ್‌ಲಿಹುಡ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು ಸ್ವೀಡನ್‌ನ ಮಾನವಹಕ್ಕುಗಳ ಪ್ರಶಸ್ತಿಯ ಆಯ್ಕೆ ಮಂಡಳಿ ಬುಧವಾರ ಘೋಷಿಸಿದೆ. ಈ ಪ್ರಶಸ್ತಿಯನ್ನು ‘ಪರ್ಯಾಯ ನೊಬೆಲ್ ಪ್ರಶಸ್ತಿ’ ಎಂಬುದಾಗಿಯೂ ಕರೆಯಲಾಗುತ್ತದೆ.

‘‘ವೈಜ್ಞಾನಿಕ ಅಂಶಗಳನ್ನು ಮುಂದಿಟ್ಟುಕೊಂಡು, ಪರಿಸರದ ರಕ್ಷಣೆಗಾಗಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಅವರ ದಿಟ್ಟ ಹಾಗೂ ಭರವಸೆಯ ರಾಜಕೀಯ ಬೇಡಿಕೆಗಳಿಗಾಗಿ ಗ್ರೆಟಾ ತನ್‌ಬರ್ಗ್‌ರನ್ನು ಗೌರವಿಸಲಾಗುತ್ತಿದೆ’’ ಎಂದು ರೈಟ್ ಲೈವ್‌ಲಿಹುಡ್ ಫೌಂಡೇಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಬೃಹತ್ತಾಗಿ ಗೋಚರಿಸುತ್ತಿರುವ ಪರಿಸರ ವಿಪತ್ತಿನೊಂದಿಗೆ ರಾಜಿಮಾಡಿಕೊಳ್ಳದ ಅವರ ದೃಢನಿರ್ಧಾರ ಜಗತ್ತಿನ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದೆ ಹಾಗೂ ಅವರೂ ತಮ್ಮ ಧ್ವನಿ ಏರಿಸಿ ತುರ್ತು ಪರಿಸರ ಸಂರಕ್ಷಣಾ ಕ್ರಮಗಳಿಗಾಗಿ ಒತ್ತಾಯಿಸುವಂತೆ ಮಾಡಿದೆ’’ ಎಂದು ಅದು ಹೇಳಿದೆ.

 ಗ್ರೆಟಾ ಅವರ ಜಾಗತಿಕ ಪರಿಸರ ಚಳವಳಿ ‘ಫ್ರೈಡೇಸ್ ಫಾರ್ ಫ್ಯೂಚರ್’ (ಭವಿಷ್ಯಕ್ಕಾಗಿ ಶುಕ್ರವಾರಗಳು) 2018ರಲ್ಲಿ ಆರಂಭಗೊಂಡಿತು. ಪ್ರತಿ ಶುಕ್ರವಾರ ಅವರು ‘ಪರಿಸರಕ್ಕಾಗಿ ಶಾಲಾ ಮುಷ್ಕರ’ ಎಂಬ ಫಲಕವನ್ನು ಹಿಡಿದುಕೊಂಡು ಸ್ವೀಡನ್ ಸಂಸತ್ತಿನ ಹೊರಗೆ ಏಕಾಂಗಿಯಾಗಿ ಧರಣಿ ನಡೆಸಿದರು. ವಿನಾಶದತ್ತ ಸಾಗುತ್ತಿರುವ ಭೂಮಿ ಗ್ರಹವನ್ನು ಮರಳಿ ಸ್ವಸ್ಥಿತಿಗೆ ತರಬೇಕು ಎನ್ನುವುದು ಅವರ ಬೇಡಿಕೆಯಾಗಿದೆ.

ಕಳೆದ ಶುಕ್ರವಾರ ಅವರ ನೇತೃತ್ವದಲ್ಲಿ ನಡೆದ ‘ಜಾಗತಿಕ ಪರಿಸರ ಮುಷ್ಕರ’ದ ವೇಳೆ ಸುಮಾರು 150 ದೇಶಗಳ 40 ಲಕ್ಷಕ್ಕೂ ಅಧಿಕ ಜನರು ಬೀದಿಗಿಳಿದು ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News