ಮುಝಪ್ಫರ್ ಆಶ್ರಯಧಾಮ ಪ್ರಕರಣ: ಈ.ಡಿ.ಯಿಂದ ಬ್ರಿಜೇಶ್ ಠಾಕೂರ್‌ಗೆ ಸೇರಿದ 12 ಸೊತ್ತು ಮುಟ್ಟುಗೋಲು
ಪಾಟ್ನಾ, ಸೆ. 25: ಮುಝಪ್ಫರ್‌ಪುರ ಆಶ್ರಯಧಾಮ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೋಟಿ ರೂಪಾಯಿಗೂ ಅಧಿಕ ಸ್ಥಿರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಸೋಮವಾರ ಔಪಚಾರಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಮುಟ್ಟುಗೋಲು ಹಾಕಿಕೊಳ್ಳಲಾದ 12 ಸೊತ್ತುಗಳಲ್ಲಿ ಬ್ರಿಜೇಶ್ ಠಾಕೂರ್ ಹಾಗೂ ಅವರ ಕುಟುಂಬಕ್ಕೆ ಸೇರಿದ ಹೊಟೇಲ್ ಕೂಡಾ ಸೇರಿದೆ.
ಮುಟ್ಟುಗೋಲು ಹಾಕಿಕೊಳ್ಳಲಾದ ಸೊತ್ತುಗಳಿಗೆ ಜಾರಿ ನಿರ್ದೇಶನಾಲಯ ನೋಟಿಸು ಅಂಟಿಸಿದೆ. ಮುಶರಿ ಸರ್ಕಲ್ ಅಧಿಕಾರಿ ನಾಗೇಂದ್ರ ಕುಮಾರ್ ಅವರನ್ನು ಒಳಗೊಂಡ ಆರು ಸದಸ್ಯರ ಜಾರಿ ನಿರ್ದೇಶನಾಲಯದ ತಂಡ ಸಾಹು ರೋಡ್‌ಗೆ ಅಪರಾಹ್ನ 2 ಗಂಟೆಗೆ ತಲುಪಿತು ಹಾಗೂ ಸೇವ ಸಂಕಲ್ಪ ಇವಾಂ ವಿಕಾಸ ಸಮಿತಿ ಎಂದು ಕರೆಯಲಾಗುವ ಸರಕಾರೇತರ ಸಂಸ್ಥೆಯ ಆಶ್ರಯಧಾಮ ಕಟ್ಟಡ ಸೇರಿದಂತೆ ಮೂರು ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಅನಂತರ ತಂಡ ಆರ್‌ಎನ್ ಪ್ಯಾಲೇಸ್ ಹೊಟೇಲ್‌ಗೆ ತೆರಳಿತು ಹಾಗೂ ಅದನ್ನು ಮುಟ್ಟುಗೋಲು ಹಾಕಿಕೊಂಡಿತು.
ತಂಡ ಭಾರತ್ ಮಾತಾ ಲೇನ್‌ನಲ್ಲಿರುವ ಸ್ವಧಾರ್ ಗೃಹ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಂಡಿತು ಹಾಗೂ ನೋಟಿಸು ಅಂಟಿಸಿತು. ಮಿಥನ್‌ಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಜವಾಹರ್‌ಲಾಲ್ ರೋಡ್ ಹಾಗೂ ರಾಮ್ ಬಾಗ್‌ನಲ್ಲಿರುವ ಎರಡು ಸೊತ್ತುಗಳನ್ನು ಕೂಡ ವಶಕ್ಕೆ ತೆಗೆದುಕೊಂಡಿತು. ಅನಂತರ ಜಾರಿ ನಿರ್ದೇಶನಾಲಯದ ತಂಡ ಸಕ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಠಾಕೂರ್‌ನ ಪೂರ್ವಜರ ಗ್ರಾಮ ಪಂಚಧಾಹಿಗೆ ಭೇಟಿ ನೀಡಿತು.