×
Ad

ಟೋಕಿಯೋ ಒಲಿಂಪಿಕ್ಸ್ ನತ್ತ ವಿನೇಶ್ ಚಿತ್ತ

Update: 2019-09-25 23:00 IST

ಹೊಸದಿಲ್ಲಿ, ಸೆ.25: ಭಾರತದ ಖ್ಯಾತ ಕುಸ್ತಿತಾರೆ ವಿನೇಶ್ ಫೋಗಟ್ ಕಝಖ್‌ಸ್ತಾನದ ನೂರ್‌ಸುಲ್ತಾನ್‌ನಲ್ಲಿ ಮೊದಲ ಬಾರಿ ವಿಶ್ವ ಮಟ್ಟದ ಪ್ರಶಸ್ತಿ(ಕಂಚು)ಜಯಿಸಿದ್ದರು. ಆದರೆ, ಅವರಿಗೆ ಪ್ರಮುಖ ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ಜಪಾನ್ ಕುಸ್ತಿಪಟುಗಳು ಕಠಿಣ ಸವಾಲೊಡ್ಡುತ್ತಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ 25ರ ಹರೆಯದ ವಿನೇಶ್ 53 ಕೆಜಿ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಮಾಯು ಮುಕೈಡಾಗೆ ಸೋತಿದ್ದರು. ಮುಕೈಡಾ ಫೈನಲ್‌ಗೆ ತಲುಪಿದ ಕಾರಣ ರಿಪೆಚೇಜ್ ಸುತ್ತಿಗೆ ತಲುಪಿದ ವಿನೇಶ್ ಕಂಚಿನ ಪದಕ ಜಯಿಸಿ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಆಡುವ ಅರ್ಹತೆ ಪಡೆದಿದ್ದರು.

‘‘ನನ್ನ ಪ್ರಕಾರ 53 ಕೆಜಿ ತೂಕ ವಿಭಾಗದಲ್ಲಿ ಪ್ರತಿಯೊಬ್ಬರೂ ಬಲಿಷ್ಠರಾಗಿರುತ್ತಾರೆ. ಆದರೆ, ಜಪಾನ್ ಕುಸ್ತಿಪಟುಗಳು ಖಂಡಿತವಾಗಿಯೂ ಬಲಶಾಲಿಗಳು. ಅವರನ್ನು ಅವರದೇ ನೆಲದಲ್ಲಿ ಮಣಿಸುವುದು ತುಂಬಾ ಕಷ್ಟಕರ. ಒಲಿಂಪಿಕ್ಸ್‌ನಲ್ಲಿ ಜಪಾನ್ ಕುಸ್ತಿಪಟುಗಳನ್ನು ಮಣಿಸಿ ಪದಕ ಜಯಿಸಿದರೆ ಅದೊಂದು ಹೆಚ್ಚು ತೃಪ್ತಿದಾಯಕ ಸಾಧನೆಯಾಗಲಿದೆ. ನಾನು ಕ್ರಮಬದ್ಧವಾಗಿ ಯೋಜನೆ ರೂಪಿಸುವೆ’’ ಎಂದು ವಿನೇಶ್ ಹೇಳಿದ್ದಾರೆ.

   ‘‘ರಿಯೋ ಒಲಿಂಪಿಕ್ಸ್‌ನಲ್ಲಿ ಕಳೆದುಕೊಂಡಿರುವ ಪದಕವನ್ನು ಮರಳಿ ಪಡೆಯಲು ಲಭಿಸಿರುವ ಅವಕಾಶವನ್ನು ಬಳಸಿಕೊಳ್ಳಲು ಇಚ್ಛಿಸಿದ್ದೇನೆ. ಆರು ನಿಮಿಷಗಳ ಕುಸ್ತಿ ಸ್ಪರ್ಧೆಯಲ್ಲಿ ಎಲ್ಲಿಯೂ ಕೂಡ ನನ್ನ ಆಟದ ತೀವ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುವೆ. ಅದು ನನಗೆ ಅತ್ಯಂತ ಮುಖ್ಯವಾಗಿದೆ. ಒಲಿಂಪಿಕ್ಸ್ ಕೋಟಾ ಪಡೆದಿರುವುದಕ್ಕೆ ನಿರಾಳವಾಗಿದ್ದೇನೆ. ನನ್ನ ಪಾಲಿಗೆ ಅದು ಮಹತ್ವದ ವಿಚಾರ. ಇನ್ನು ಮುಂದೆ ನಾನು ಒಲಿಂಪಿಕ್ಸ್‌ಗೆ ಸಜ್ಜಾಗುವೆ. ಈ ಹಿಂದೆ ನಾವು ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆಯಲು ನಿರಂತರ ಹೋರಾಟ ನಡೆಸಬೇಕಾಗಿತ್ತು. ಅಂತಹ ಟೂರ್ನಮೆಂಟ್‌ಗ ತಯಾರಾಗಲು ಸಮಯ ಲಭಿಸುತ್ತಿರಲಿಲ್ಲ. ಇದೀಗ ನನಗೆ ಒಲಿಂಪಿಕ್ಸ್ ಗೆ ತಯಾರಾಗಲು, ಕೌಶಲ್ಯವನ್ನು ವೃದ್ದಿಸಿಕೊಳ್ಳಲು ಸಾಕಷ್ಟು ಸಮಯವಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾನು ಮಾಡಿದ್ದ ತಪ್ಪನ್ನು ತಿದ್ದಿಕೊಳ್ಳುವೆ. ನಾವು ಏನೇ ಉತ್ತಮವಾದುದನ್ನು ಪಡೆಯಲು ಸಮಯದ ಅಗತ್ಯವಿರುತ್ತದೆ. ನನಗೆ ಲಭಿಸಿರುವ ಸಮಯಾವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತೇನೆ’’ ಎಂದು ವಿನೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News