×
Ad

ಪಿಎಂಸಿ ಬ್ಯಾಂಕ್ ಹಣ ವಿತ್ ಡ್ರಾ ಮಿತಿ ಏರಿಕೆ

Update: 2019-09-26 20:09 IST

ಹೊಸದಿಲ್ಲಿ, ಸೆ.26: ಅವ್ಯವಹಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮುಂಬೈ ಮೂಲದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಗ್ರಾಹಕರ ಹಣ ಹಿಂಪಡೆಯುವಿಕೆ ಮೇಲೆ ಮಿತಿ ಹೇರಿದ್ದ ಆರ್‌ಬಿಐ ಗುರುವಾರ ಈ ಮಿತಿಯನ್ನು ಒಂದು ಸಾವಿರ ರೂ.ನಿಂದ 10,000ರೂ.ಗೆ ಏರಿಸಿದೆ.

ಹೊಸ ಮಿತಿಯಿಂದಾಗಿ ಬ್ಯಾಂಕ್‌ನ ಶೇ.60 ಠೇವಣಿದಾರರು ತಮ್ಮ ಖಾತೆಯಿಂದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಠೇವಣಿದಾರರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಸದ್ಯ ಭಾರತೀಯ ರಿಸರ್ವ್ ಬ್ಯಾಂಕ್ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದೆ ಮತ್ತು ಬ್ಯಾಂಕ್ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಪಿಎಂಸಿ ಬ್ಯಾಂಕ್‌ನ ಗ್ರಾಹಕರ ಹಣ ಹಿಂಪಡೆಯುವಿಕೆ ಮಿತಿ ಮೇಲೆ ಮಂಗಳವಾರ ನಿರ್ಬಂಧ ಹೇರಿದ್ದ ಆರ್‌ಬಿಐ, ಈ ಮಿತಿ ಮುಂದಿನ ಆರು ತಿಂಗಳು ಮುಂದುವರಿಯಲಿದೆ ಎಂದು ತಿಳಿಸಿತ್ತು. ಈ ಸಮಯದಲ್ಲಿ ಪಿಎಂಸಿ ಬ್ಯಾಂಕ್ ಯಾವುದೇ ಸಾಲ ನೀಡುವುದು ಅಥವಾ ಪರಿಷ್ಕರಿಸುವುದು ಮತ್ತು ಹೂಡಿಕೆ ಮಾಡುವುದರ ಮೇಲೆಯೂ ಆರ್‌ಬಿಐ ತಡೆ ಹೇರಿತ್ತು. ಆರ್‌ಬಿಐ ನಿರ್ಧಾರವನ್ನು ವಿರೋಧಿಸಿ ಬ್ಯಾಂಕ್ ಖಾತೆದಾರರು ಮುಂಬೈಯ ಭಾಂಡುಪ್‌ನಲ್ಲಿರುವ ಬ್ಯಾಂಕ್‌ನ ಮುಖ್ಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News