×
Ad

“ಅತ್ಯಾಚಾರ ಆರೋಪಿ ಬಿಜೆಪಿ ನಾಯಕನಿಗೆ ಚುನಾವಣಾ ಕರ್ತವ್ಯ!”

Update: 2019-09-26 20:16 IST
ಸಂಜಯ ಕುಮಾರ್

  ಹೊಸದಿಲ್ಲಿ,ಸೆ.26: ಅತ್ಯಾಚಾರದ ಆರೋಪವನ್ನು ಹೊತ್ತಿರುವ ಉತ್ತರಾಖಂಡ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ಅವರನ್ನು ಪಕ್ಷಕ್ಕೆ ಮರುಸೇರ್ಪಡೆಗೊಳಿಸಲಾಗಿದೆ ಎಂದು ರಾಷ್ಟ್ರಮಟ್ಟದ ಆಂಗ್ಲ ದೈನಿಕವೊಂದು ತನ್ನ ವರದಿಯಲ್ಲಿ ಹೇಳಿದೆ.

ಮುಂಬರುವ ಹರ್ಯಾಣ ವಿಧಾನ ಸಭೆಯಲ್ಲಿ ಪ್ರಚಾರ ಕಾರ್ಯಕ್ಕಾಗಿ ನಿಯೋಜಿಸಲಾಗಿರುವ ಪಕ್ಷದ ನಾಯಕರ ಪಟ್ಟಿಯಲ್ಲಿ ಕುಮಾರ್ ಹೆಸರಿದೆ ಎಂದು ಅದು ತಿಳಿಸಿದೆ. ಈ ಕುರಿತು ತನಿಖೆಗಳಿದ ಸುದ್ದಿ ಜಾಲತಾಣ ‘ದಿ ವೈರ್’ ಪಟ್ಟಿಯನ್ನು ಪರಿಶೀಲಿಸಿದೆ,ಆದರೆ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸಲು ಅದಕ್ಕೆ ಸದ್ಯಕ್ಕೆ ಸಾಧ್ಯವಾಗಿಲ್ಲ.

ಇದೊಂದು ತಪ್ಪು ಗ್ರಹಿಕೆಯಾಗಿದೆ. ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ‘ಸಂಜಯ ’ ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ಸಂಜಯ ಅಲ್ಲ,ಅವರು ಪಕ್ಷದ ಇನ್ನೋರ್ವ ಕಾರ್ಯಕರ್ತರಾಗಿದ್ದಾರೆ ಎಂದು ಹರ್ಯಾಣ ರಾಜ್ಯ ಬಿಜೆಪಿ ಸಂಚಾಲಕ ಲಲಿತ್ ಬನ್ನಾ ಅವರು ತನ್ನನ್ನು ಸಂಪರ್ಕಿಸಿದ ದಿ ವೈರ್‌ಗೆ ಸಮಜಾಯಿಷಿ ನೀಡಿದ್ದಾರೆ.

  ಕಳೆದ ವರ್ಷ ಆರೆಸ್ಸೆಸ್‌ನ ಮಹಿಳಾ ಘಟಕವಾಗಿರುವ ರಾಷ್ಟ್ರ ಸೇವಿಕಾ ಸಮಿತಿಯ ಮಾಜಿ ಕಾರ್ಯಕರ್ತೆಯೋರ್ವರು ಕುಮಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಆರೋಪಿಸಿದ್ದರು. ನಂತರ,ಏಳು ವರ್ಷಗಳಿಂದ ಉತ್ತರಾಖಂಡ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಕುಮಾರ್‌ಗೆ ಮತ್ತೊಮ್ಮೆ ಪಕ್ಷದ ಹುದ್ದೆಯನ್ನು ನೀಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಬರೆದಿರುವ ಪತ್ರದಲ್ಲಿ ದೂರಿರುವ ಸಂತ್ರಸ್ತೆ, ಕುಮಾರ್ ಅವರ ಅಪರಾಧದ ಬಗ್ಗೆ ಮತ್ತು ಅವರು ಪಕ್ಷಕ್ಕೆ ಮರುಸೇರ್ಪಡೆಗೊಳ್ಳಲು ನೆರವಾಗಿರುವವರ ವಿರುದ್ಧ ತನಿಖೆ ನಡೆಸಬೇಕು ಮತ್ತು ಅವರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸರು ಅತ್ಯಾಚಾರ ಆರೋಪವನ್ನು ತೆಗೆದುಹಾಕಿ ಲೈಂಗಿಕ ಕಿರುಕುಳ ಆರೋಪವನ್ನು ಸೇರಿಸುವ ಮೂಲಕ ಪ್ರಕರಣವನ್ನು ದುರ್ಬಲಗೊಳಿಸಿದ್ದಾರೆ. ಡೆಹ್ರಾಡೂನಿನ ಬಿಜೆಪಿ ಕಾರ್ಯಕರ್ತರು ತನಗೆ ನಿರಂತರ ಕಿರುಕುಳಗಳನ್ನು ನೀಡುತ್ತಿದ್ದಾರೆ ಮತ್ತು ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News