ಮಂಗಳೂರಿನಲ್ಲಿ ಎಷ್ಟು ಪೊಲೀಸ್ ಕ್ಯಾಮರಾಗಳು ನಿಮ್ಮ ಮೇಲೆ ಕಣ್ಣಿಟ್ಟಿವೆ ಗೊತ್ತಾ?

Update: 2019-09-26 16:59 GMT

ನಿಮ್ಮ ಚಟುವಟಿಕೆಗಳನ್ನು, ನಿಮ್ಮಿಂದಾದ ಟ್ರಾಫಿಕ್ ಉಲ್ಲಂಘನೆಗಳನ್ನು, ನೀವು ಮಂಗಳೂರಿನ ಅಂಗಡಿಗಳಿಗೆ ಭೇಟಿ ನೀಡಿದ್ದನ್ನು ಎಷ್ಟು ಪೊಲೀಸ್ ಕ್ಯಾಮರಾಗಳು ಸೆರೆ ಹಿಡಿದಿರಬಹುದು ಎಂದು ನೀವು ಎಂದಾದರೂ ಆಲೋಚಿಸಿದ್ದೀರಾ..?, ಹಾಗಿದ್ದರೆ ನಿಮ್ಮ ಮೇಲೆ ನಿಗಾ ಇಟ್ಟಿರುವ ಮಂಗಳೂರಿನ ಪೊಲೀಸ್ ಕ್ಯಾಮರಾಗಳ ಸಂಪೂರ್ಣ ವಿವರ ಇಲ್ಲಿದೆ.

ನೂತನ ಮೋಟರ್ ವಾಹನ ಕಾಯ್ದೆ ಜಾರಿಗೆ ಬಂದ ನಂತರ ಪೊಲೀಸ್ ಕ್ಯಾಮರಾಗಳ ಕೆಲಸಗಳೂ ಹೆಚ್ಚಾಗಿವೆ. ಟ್ರಾಫಿಕ್ ನಿಯಮ ಉಲ್ಲಂಘಿಸುವವರು ಪೊಲೀಸರಿಂದ ಪಾರಾದರೂ ಪೊಲೀಸ್ ಕ್ಯಾಮರಾಗಳಿಂದ ಪಾರಾಗಲು ಸಾಧ್ಯವಿಲ್ಲ. ನಿಯಮ ಉಲ್ಲಂಘಿಸಿದವರ ಮನೆ ವಿಳಾಸಕ್ಕೆ ದಂಡದ ಚಲನ್ ತಲುಪಿರುತ್ತದೆ!.

ಇಷ್ಟು ಮಾತ್ರವಲ್ಲದೆ ನಗರದಲ್ಲಿ ಸಿಸಿ ಕ್ಯಾಮರಾಗಳು ಹಲವು ಕೊಲೆ ಪ್ರಕರಣಗಳನ್ನು ಭೇದಿಸುವಲ್ಲೂ ಪೊಲೀಸರಿಗೆ ನೆರವಾಗಿವೆ. ಅದಕ್ಕೆ ಉದಾಹರಣೆಯೆಂದರೆ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ.

“ಮಂಗಳೂರು ನಗರದಲ್ಲಿ 24 X 7 ಗಂಟೆ ಕಾರ್ಯನಿರ್ವಹಿಸುವ 93 ಕ್ಯಾಮರಾಗಳಿವೆ. ಆರಂಭಿಕ ಹಂತದಲ್ಲಿ ನಗರದಲ್ಲಿ ಕೇವಲ 18 ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ 2017ರಲ್ಲಿ ಹೆಚ್ಚುವರಿ 75 ಕ್ಯಾಮರಾಗಳನ್ನು ಅಳವಡಿಸಲಾಯಿತು. ನಿರ್ದಿಷ್ಟ ಸಮಯದವರೆಗೆ ಈ ಕ್ಯಾಮರಾಗಳ ಡೇಟಾವನ್ನು ಇರಿಸಿಕೊಳ್ಳಲಾಗುತ್ತದೆ” ಎಂದು ಪೊಲೀಸ್ ಅಧಿಕಾರಿ ಮಂಜುನಾಥ ಶೆಟ್ಟಿ ಮಾಹಿತಿ ನೀಡುತ್ತಾರೆ.

ಅಗತ್ಯಬಿದ್ದಾಗ ಪೊಲೀಸರು ಖಾಸಗಿ ಸಿಸಿ ಕ್ಯಾಮರಾಗಳ ಫೂಟೇಜ್ ಗಳನ್ನೂ ಪಡೆಯಬೇಕಾಗುತ್ತದೆ. ಎಲ್ಲಾ ಕ್ಯಾಮರಾಗಳನ್ನು 24X7 ಗಂಟೆಗಳ ಕಾಲ ಕಂಟ್ರೋಲ್ ರೂಮ್ ನಿಂದ ನಿರ್ವಹಿಸಲಾಗುತ್ತದೆ ಎಂದವರು ಹೇಳುತ್ತಾರೆ.

“ಅಲ್ಲಿ ಸಿಸಿ ಕ್ಯಾಮರಾಗಳನ್ನು ಪೊಲೀಸರು ದಿನದ 24 ಗಂಟೆಗಳ ಕಾಲವೂ ನಿರ್ವಹಿಸುತ್ತಿರುತ್ತಾರೆ. ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ಅವರು ಗುರುತಿಸುತ್ತಾರೆ. ಕ್ಯಾಮರಾಗಳ ಮೂಲಕವೇ ಪ್ರತಿದಿನ ಕನಿಷ್ಟ 100 ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ ಹೊಸ ನಿಯಮದ ನಂತರ 50ರಿಂದ 60 ಪ್ರಕರಣಗಳು ವರದಿಯಾಗುತ್ತವೆ” ಎಂದವರು ಹೇಳುತ್ತಾರೆ.

“ಯುವಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ತಮ್ಮ ಸುರಕ್ಷತೆಗಾಗಿ ಯುವಜನರು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು. ಆದರೆ ದುರದೃಷ್ಟವಶಾತ್ ಅವರು ಟ್ರಾಫಿಕ್ ಪೊಲೀಸರನ್ನು ಕಂಡರೆ ಮಾತ್ರ ನಿಯಮಗಳನ್ನು ಪಾಲಿಸುತ್ತಾರೆ. ಹೊಸ ಕಾನೂನಗಳ ಕಾರಣ ಭಾರೀ ದಂಡ ಪಾವತಿಸಬೇಕು ಎನ್ನುವ ಭಯದಿಂದ ಜನರು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಉದ್ದೇಶ ಈಡೇರಿದರೂ ಇದು ನೈತಿಕ ಎಂದೆನಿಸುವುದಿಲ್ಲ. ಜನರು ಅವರ ಮತ್ತು ಇತರರ ಸುರಕ್ಷತೆಗಾಗಿ ಟ್ರಾಫಿಕ್ ನಿಯಮಗಳನ್ನು ಪಾಲಿಸಿದರೆ ನಾವು ಸಂತಸಪಡುತ್ತೇವೆ” ಎಂದು ಮಂಜುನಾಥ ಶೆಟ್ಟಿ ಹೇಳುತ್ತಾರೆ.

ಇಷ್ಟೇ ಅಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಇನ್ನೂ 60 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. 2020ರ ವೇಳೆಗೆ ಈ ಕ್ಯಾಮರಾಗಳು ಕಾರ್ಯ ನಿರ್ವಹಿಸಲಿದೆ ಎಂದವರು ಮಾಹಿತಿ ನೀಡಿದರು.

ಹಾಗಾಗಿ, ಇನ್ನು ನೀವು ಹೆಲ್ಮೆಟ್ ಧರಿಸದೆ, ಸೀಟ್ ಬೆಲ್ಟ್ ಧರಿಸದೆ ಅಥವಾ ಇನ್ಯಾವುದೇ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದರೆ ಈ ಕ್ಯಾಮರಾಗಳ ಬಗ್ಗೆ ನೆನಪಿರಲಿ. ನೀವು ಮತ್ತೊಂದು ಬಾರಿ ನಿಯಮ ಉಲ್ಲಂಘಿಸುವ ಮೊದಲು ದಂಡದ ಚಲನ್ ನಿಮ್ಮ ಮನೆಗೆ ತಲುಪಿರಬಹುದು.

Writer - ಇಸ್ಮಾಯೀಲ್ ಝೌರೇಝ್

contributor

Editor - ಇಸ್ಮಾಯೀಲ್ ಝೌರೇಝ್

contributor

Similar News