ರಾಜಕೀಯದಿಂದ ದೂರ ಇರಿ: ರಜನಿ, ಕಮಲ್‌ಗೆ ಸಲಹೆ ನೀಡಿದ್ದು ಯಾರು ಗೊತ್ತೇ ?

Update: 2019-09-27 04:15 GMT

ಹೈದರಾಬಾದ್: "ನೀವು ಭಾವಜೀವಿಗಳಾಗಿದ್ದರೆ ರಾಜಕೀಯದಲ್ಲಿ ಇರುವುದರಲ್ಲಿ ಅರ್ಥವಿಲ್ಲ; ರಾಜಕೀಯದಿಂದ ದೂರ ಇರಿ" ಎಂದು ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಸಲಹೆ ಮಾಡಿದ್ದಾರೆ.

ಆನಂದ ವಿಕಟನ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ, "ಸಿನಿಮಾ ವೃತ್ತಿಯಲ್ಲಿ ಅವರು ನಂಬರ್ ವನ್; ಒಳ್ಳೆಯದು ಮಾಡುವ ಉದ್ದೇಶ ದಿಂದ ಅವರು ರಾಜಕೀಯಕ್ಕೆ ಧುಮುಕಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಇಂದಿನ ರಾಜಕೀಯ ಎಂದರೆ ಹಣ; ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನನ್ನನ್ನು ನನ್ನ ಸ್ವಂತ ಕ್ಷೇತ್ರದಲ್ಲೇ ಸೋಲಿಸಲಾಯಿತು. ನನ್ನ ಸಹೋದರ ಪವನ್ ಕಲ್ಯಾಣ್‌ಗೂ ಇದೇ ಸ್ಥಿತಿ ಬಂತು. ರಾಜಕೀಯದಲ್ಲಿ ಇರಲು ನಾವು ಸೋಲು, ಹತಾಶೆ ಮತ್ತು ಅವಮಾನ ಎದುರಿಸಬೇಕು" ಎಂದು ವಿಶ್ಲೇಷಿಸಿದ್ದಾರೆ.

"ಕಮಲ್‌ ಹಾಸನ್ ಅವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಒಳ್ಳೆಯ ಸಾಧನೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಕಮಲ್‌ ಹಾಸನ್ ಸ್ವತಃ ಸ್ಪರ್ಧಿಸಲಿಲ್ಲ ಹಾಗೂ ಅವರ ಪಕ್ಷ ಕೂಡಾ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ರಜನೀಕಾಂತ್ ಇನ್ನೂ ಪಕ್ಷ ಕಟ್ಟಿಲ್ಲ ಹಾಗೂ ಚುನಾವಣೆಗೂ ಸ್ಪರ್ಧಿಸಿಲ್ಲ" ಎಂದು ಹೇಳಿದ್ದಾರೆ.

2008ರಲ್ಲಿ ತಿರುಪತಿಯಲ್ಲಿ ಪ್ರಜಾರಾಜ್ಯಂ ಪಕ್ಷ ಘೋಷಿಸಿದ ಚಿರಂಜೀವಿಯವರು 2009ರ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ 18 ಸ್ಥಾನ ಗೆದ್ದಿದ್ದರು. ತಿರುಪತಿ ಹಾಗೂ ಹುಟ್ಟೂರು ಪಾಲಕೋಲ್ ಎರಡೂ ಕ್ಷೇತ್ರಗಳಲ್ಲಿ ಅವರು ಸೋಲು ಅನುಭವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News